ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ(MSP) ಯೋಜನೆಯಡಿ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಕಿಯಲ್ಲಿ ರಾಜ್ಯ ಸರ್ಕಾರ ಶುಕ್ರವಾರ 600 ಕೋಟಿ ರೂ. ಬಿಡುಗಡೆ ಮಾಡಿದೆ.
ಏಪ್ರಿಲ್ 16ರವರೆಗೆ ಖರೀದಿಸಿದ್ದ ರಾಗಿ ಮತ್ತು ಏಪ್ರಿಲ್ 23ರ ವರೆಗೆ ಖರೀದಿಸಿದ್ದ ಜೋಳದ ಮೊತ್ತ 600 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರಾಗಿ ಮಾರಾಟ ಮಾಡಿದ್ದ ರೈತರಿಗೆ ಇನ್ನು 700 ಕೋಟಿ ರೂ., ಜೋಳ ಮಾರಾಟ ಮಾಡಿದ್ದ ರೈತರಿಗೆ 400 ಕೋಟಿ ರೂ. ಸೇರಿದಂತೆ ಸುಮಾರು 1100 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ.
ಜೋಳ ಮಾರಾಟ ಮಾಡಿದ್ದ ರಾಯಚೂರು ಜಿಲ್ಲೆಯ 4842 ರೈತರಿಗೆ 89 ಕೋಟಿ ರೂ., ಬಳ್ಳಾರಿ ಜಿಲ್ಲೆಯ 3926 ರೈತರಿಗೆ 73 ಕೋಟಿ ರೂ. ಜಮಾ ಮಾಡಲಾಗಿದೆ.
ರಾಗಿ ಮಾರಾಟ ಮಾಡಿದ್ದ ಹಾಸನ ಜಿಲ್ಲೆಯ 7758 ರೈತರಿಗೆ 86 ಕೋಟಿ ರೂ., ತುಮಕೂರು ಜಿಲ್ಲೆಯ 7190 ರೈತರಿಗೆ 78 ಕೋಟಿ ರೂ., ಮೈಸೂರಿನ 4616 ರೈತರಿಗೆ 50 ಕೋಟಿ ರೂ., ಚಿಕ್ಕಮಗಳೂರಿನ 3425 ರೈತರಿಗೆ 41 ಕೋಟಿ ರೂ., ಚಿತ್ರದುರ್ಗದ 2322 ರೈತರಿಗೆ 27 ಕೋಟಿ ರೂ. ಸೇರಿ 15 ಜಿಲ್ಲೆಯ 38,388 ರೈತರಿಗೆ 436 ಕೋಟಿ ರೂ. ಜಮಾ ಮಾಡಲಾಗಿದೆ.

