ಬೆಂಗಳೂರು: ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿದ ಆದಾಯ ಮಿತಿಯನ್ನು ಮೂರು ಲಕ್ಷ ರೂ.ಗೆ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿದ 1.20 ಲಕ್ಷ ರೂ. ವಾರ್ಷಿಕ ಆದಾಯವನ್ನು ಆಡಳಿತಾತ್ಮಕ ಸುಧಾರಣೆ ಆಯೋಗದ ಶಿಫಾರಸಿನಂತೆ ಮೂರು ಲಕ್ಷ ರೂ.ಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ತೆರಿಗೆ ಪಾವತಿ ಸೇರಿ ವಿವಿಧ ಕಾರಣಗಳಿಂದ ಪಡಿತರ ಹಂಚಿಕೆ ಸ್ಥಗಿತಗೊಂಡಿರುವ ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ. ಪಡಿತರ ಚೀಟಿ ಹೊಂದಿರುವ ಮನೆಯ ಯಜಮಾನಿ ನಿಧನರಾದರೆ ಅವರ ಸ್ಥಾನದಲ್ಲಿ ಸೊಸೆಯ ಅಥವಾ ಮಗಳ ಹೆಸರು ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಸೇರ್ಪಡೆಯಾಗಲಿದೆ. ಈ ಹಿಂದೆ ಅರ್ಜಿ ಸಲ್ಲಿಸಿ ಅನುಮೋದನೆ ಸಿಗಲು ಮೂರು ತಿಂಗಳು ಸಮಯವಾಗುತ್ತಿತ್ತು ಎಂದು ಹೇಳಿದ್ದಾರೆ.
ನ್ಯಾಯಬೆಲೆ ಅಂಗಡಿಗಳನ್ನು ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ತೆರೆಯಲು ಸೂಚಿಸಲಾಗಿದೆ. ಅಂಗಡಿಗಳನ್ನು ತೆರೆಯದಿದ್ದರೆ ಆಹಾರ ಇಲಾಖೆಯ ಸಹಾಯವಾಣಿ 1967 ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದ್ದಾರೆ.

