ಬೆಂಗಳೂರು: ರಾಜ್ಯ ಸರ್ಕಾರವು ಐಎಎಸ್ (IAS) ಅಧಿಕಾರಿಗಳ ಮಟ್ಟದಲ್ಲಿ ಪ್ರಮುಖ ರದ್ದು-ಬದಲಾವಣೆ ಮಾಡಿದ್ದು, 3 ಉನ್ನತ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೋಲಾರ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ (DC) ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ಹೊಸ ಆಯುಕ್ತರನ್ನು ನೇಮಕಗೊಳಿಸಿ ಡಿಪಿಎಆರ್ ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಆದೇಶ ನೀಡಿದ್ದಾರೆ.ವರ್ಗಾವಣೆಯಾದ ಅಧಿಕಾರಿಗಳು ತಕ್ಷಣವೇ ನಿಯೋಜಿತ ಸ್ಥಳಗಳಲ್ಲಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಕೋಲಾರ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ:
ಬೆಂಗಳೂರಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ರವಿ ಕುಮಾರ್ ಎಂ.ಆರ್ ಅವರನ್ನು ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಪ್ರಸ್ತುತ ಕೋಲಾರ ಡಿಸಿಯಾಗಿರುವ ಡಾ. ರವಿ ಎಂ.ಆರ್. ಅವರು ಜುಲೈ 31ರಂದು ವಯೋನಿವೃತ್ತಿ ಹೊಂದಲಿದ್ದಾರೆ. ಅವರ ನಿವೃತ್ತಿಯ ತರುವಾಯ, ಅಂದರೆ ಆಗಸ್ಟ್ 1 ರಿಂದ ಅನ್ವಯವಾಗುವಂತೆ ರವಿ ಕುಮಾರ್ ಎಂ.ಆರ್ ಅವರು ಕೋಲಾರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಗೆ ರಾಹುಲ್ ರತ್ನಂ ಪಾಂಡೆ ಕಮಿಷನರ್:
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (KSMSCL) ವ್ಯವಸ್ಥಾಪಕ ನಿರ್ದೇಶಕರಾಗಿದ್ದ 2018ರ ಕೇಡರ್‌ನ ಐಎಎಸ್ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ನೇಮಿಸಲಾಗಿದೆ. ಇಲ್ಲಿಯವರೆಗೆ ಆಯುಕ್ತರಾಗಿದ್ದ ಕೆಎಎಸ್ ಅಧಿಕಾರಿ ರವಿಚಂದ್ರ ನಾಯಕ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ರಾಹುಲ್ ರತ್ನಂ ಪಾಂಡೆ ಅವರು ಈ ಹಿಂದೆ ಕೊಪ್ಪಳ ಜಿ.ಪಂ. ಸಿಇಒ, ಕುಮಟಾ ಸಹಾಯಕ ಆಯುಕ್ತ ಹಾಗೂ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಎಂಡಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳ ಬಳಿಕ ಮಂಗಳೂರು ಮನಪಾಗೆ ಐಎಎಸ್ ಅಧಿಕಾರಿಯೊಬ್ಬರು ಆಯುಕ್ತರಾಗಿ ನಿಯುಕ್ತಿಯಾಗಿರುವುದು ವಿಶೇಷ.
KSMSCL ನೂತನ ಎಂಡಿಯಾಗಿ ಎ.ಆರ್. ರವಿ ನೇಮಕ:
ಸ್ಥಳನಿಯುಕ್ತಿಗಾಗಿ ಕಾಯುತ್ತಿದ್ದ ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಎ.ಆರ್. ರವಿ ಅವರನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ (MD) ನೇಮಕ ಮಾಡಲಾಗಿದೆ. ರಾಹುಲ್ ರತ್ನಂ ಪಾಂಡೆ ಅವರ ವರ್ಗಾವಣೆಯಿಂದ ಖಾಲಿಯಾಗಿದ್ದ ಸ್ಥಾನಕ್ಕೆ ಇವರನ್ನು ನಿಯೋಜಿಸಲಾಗಿದೆ.
ವರ್ಗಾವಣೆಯಾದ IAS ಅಧಿಕಾರಿಗಳ ಪಟ್ಟಿ:
1.ರವಿ ಕುಮಾರ್ ಎಂ.ಆರ್.
ಹಿಂದಿನ ಹುದ್ದೆ: ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ನೂತನ ಹುದ್ದೆ: ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ (ಆಗಸ್ಟ್ 1 ರಿಂದ ಅನ್ವಯ)
2.ರತ್ನಂ ಪಾಂಡೆ
ಹಿಂದಿನ ಹುದ್ದೆ: ವ್ಯವಸ್ಥಾಪಕ ನಿರ್ದೇಶಕರು (MD), KSMSCL, ಬೆಂಗಳೂರು
ನೂತನ ಹುದ್ದೆ: ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ
3.ಎ. ಆರ್. ರವಿ
ಹಿಂದಿನ ಹುದ್ದೆ: ಜಂಟಿ ನಿರ್ದೇಶಕರು, ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ನಿರ್ದೇಶನಾಲಯ
ನೂತನ ಹುದ್ದೆ: ವ್ಯವಸ್ಥಾಪಕ ನಿರ್ದೇಶಕರು (MD), KSMSCL, ಬೆಂಗಳೂರು

