ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಣೆ ಮಾಡಲು ಆರೋಪಿಯೊಬ್ಬ ಖತರ್ನಾಕ್ ಐಡಿಯಾ ಮಾಡಿಯೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಬಾಯಲ್ಲಿ ಚಿನ್ನದ ಎರಡು ಕ್ಯಾಪ್ಸೂಲ್ ಗಳನ್ನು ಇಟ್ಟುಕೊಂಡು ದುಬೈನಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕ ತಪಾಸಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ದುಬೈನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಬಾಯಿಯಲ್ಲಿ ಬರೋಬ್ಬರಿ 82 ಗ್ರಾಂ ಚಿನ್ನದ ಎರಡು ಕ್ಯಾಪ್ಸೂಲ್ಸ್ ಪತ್ತೆಯಾಗಿದೆ. ಮಹಮ್ಮದ್ ಸಿರಾಜ್ ಎಂಬ ಪ್ರಯಾಣಿಕ ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದ. ಬಳಿಕ ಬೆಂಗಳೂರಿನಿಂದ ಗಾಜಿಯಾಬಾದ್‌ಗೆ ತೆರಳಲು ಸಿದ್ಧವಾಗಿದ್ದ. ಈ ವೇಳೆ ಏರ್‌ಪೋರ್ಟ್‌ನಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಆತನ ವರ್ತನೆ ಅನುಮಾನ ಮೂಡಿಸಿದೆ.
ಸಿಬ್ಬಂದಿ ಆತನನ್ನು ಪರಿಶೀಲಿಸಿದರೂ ಮೊದಲಿಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಬಳಿಕ ಆತನ ಬಾಯಿಯನ್ನು ಪರಿಶೀಲಿಸಿದಾಗ ಎರಡು ಚಿನ್ನದ ಕ್ಯಾಪ್ಸೂಲ್‌ಗಳು ಪತ್ತೆಯಾಗಿವೆ. ಅವುಗಳಲ್ಲಿ ಒಟ್ಟು 82 ಗ್ರಾಂ ಚಿನ್ನ ಇತ್ತು ಎನ್ನಲಾಗಿದೆ. ಬಾಡಿ ಸ್ಕ್ಯಾನರ್‌ನಿಂದ ಚಿನ್ನ ಪತ್ತೆಯಾಗದಂತೆ ಮಾಡಲು ಬಾಯಿಯಲ್ಲಿ ಚಿನ್ನದ ಕ್ಯಾಪ್ಸೂಲ್‌ಗಳನ್ನು ಇಟ್ಟುಕೊಂಡು ಬಂದಿದ್ದ ಎನ್ನಲಾಗಿದೆ.
ಪ್ರಯಾಣಿಕ ಮಹಮ್ಮದ್ ಸಿರಾಜ್‌ನನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆಗಾಗಿ ಏರ್ ಪೋರ್ಟ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

