ಬೆಂಗಳೂರು: ರಾಜ್ಯದಲ್ಲಿ ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಅನಿವಾಸಿ ಭಾರತೀಯರ ಕಲ್ಯಾಣ, ವಿದೇಶಿ ಉದ್ಯೋಗಾವಕಾಶಗಳಿಗೆ ನೆರವು ಹಾಗೂ ಜಾಗತಿಕ ಸಹಯೋಗಕ್ಕೆ ಉತ್ತೇಜನ ನೀಡುವುದು ಈ ಇಲಾಖೆಯ ಪ್ರಮುಖ ಉದ್ದೇಶವಾಗಿದೆ.
ಹೂಡಿಕೆದಾರರನ್ನು ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಸಂಪರ್ಕಿಸಿ, ಅವರ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯಗೊಳಿಸುವ ಮೂಲಕ ಕರ್ನಾಟಕವನ್ನು ಜಾಗತಿಕ ಹೂಡಿಕೆಯ ಪ್ರಮುಖ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ರಾಜ್ಯದ ಜಾಗತಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ವಿಶೇಷ ಮಂಡಳಿ ರಚಿಸಲಾಗುವುದು. ಸಂಶೋಧನೆ, ನಾವೀನ್ಯತೆ, ಸಾಂಸ್ಕೃತಿಕ ವಿನಿಮಯ, ಕ್ರೀಡೆ, ಆರೋಗ್ಯ, ವೈದ್ಯಕೀಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಜಾಗತಿಕ ಸಹಯೋಗಕ್ಕೆ ಒತ್ತು ನೀಡಲಾಗುವುದು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

