ಬೆಂಗಳೂರು: ನೈಸ್ ಯೋಜನೆಗೆ ಭೂಮಿ ನೀಡಿದವರಿಗೆ ನಿವೇಶನ ನೀಡುವ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಪರಮೇಶ್ವರ್, ನೈಸ್ ಯೋಜನೆಗೆ ಸ್ವಯಂ ಪ್ರೇರಿತವಾಗಿ ಭೂಮಿ ಕೊಟ್ಟವರಿಗೆ ನೈಸ್ ಟೌನ್ಶಿಪ್ನಲ್ಲಿ ನಿವೇಶನ ನೀಡಲು ಸಚಿವ ಸಂಪಟ ಸಭೆ ತೀರ್ಮಾನಿಸಿದೆ ಎಂದರು.
ನೈಸ್ ಸಂಸ್ಥೆಗೆ ರೈತರು ಜಮೀನು ಕೊಡುವ ವೇಳೆ ಕೆಲವರು ಸ್ವಯಂ ಪ್ರೇರಿತವಾಗಿ ತಮ್ಮ ಭೂಮಿಯನ್ನು ಕೊಟ್ಟಿದ್ದರು. ಅಂದಿನ ಡಿಸಿ, ಸಮಿತಿ ಜಮೀನು ಕೊಟ್ಟವರಿಗೆ ನೈಸ್ ಟೌನ್ಶಿಪ್ನಲ್ಲಿ ಸೈಟ್ ನೀಡಲು ತೀರ್ಮಾನಿಸಿದ್ದರು. ಅದರಂತೆ 1 ಎಕರೆ ಒಳಗೆ ಜಮೀನು ಕೊಟ್ಟವರಿಗೆ 30/40 ನಿವೇಶನ, 1 ಎಕರೆಗಿಂತ ಹೆಚ್ಚಿನ ಜಮೀನು ನೀಡಿದವರಿಗೆ 60/40 ನಿವೇಶನ ನೀಡಲು ತೀರ್ಮಾನಿಸಲಾಗಿತ್ತು. ಇದಕ್ಕೆ ನೈಸ್ ಸಂಸ್ಥೆಯೂ ಒಪ್ಪಿಕೊಂಡಿತ್ತು. ಈ ಅಂಶ ಫ್ರೇಮ್ ವರ್ಕ್ ಅಗ್ರೀಮೆಂಟ್ನಲ್ಲಿ ಇಲ್ಲ. ಇತ್ತ ಜಮೀನು ಕಳೆದುಕೊಂಡವರು ನಿವೇಶನ ನೀಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು ಎಂದು ವಿವರಿಸಿದರು.
ಸ್ವಯಂಪ್ರೇರಿತವಾಗಿ ಭೂಮಿ ಕೊಟ್ಟ 1,453 ರೈತರು ಇದ್ದಾರೆ. ಇವರಿಗೆ 4 ಜಾಗಗಳಲ್ಲಿ ನಿವೇಶನ ನೀಡಲು ತೀರ್ಮಾನಿಸಲಾಗಿದೆ. ಸದ್ಯ 570 ನಿವೇಶನಗಳು ಲಭ್ಯ ಇದೆ. 30/40 ವಿಸ್ತೀರ್ಣದ 231 ಸೈಟ್ ಲಭ್ಯವಿದೆ, 40/60 ವಿಸ್ತೀರ್ಣದ 243 ಸೈಟ್ಗಳು ಲಭ್ಯವಿದೆ. ಇನ್ನೂ 579 ಸೈಟ್ಗಳು ಬೇಕಾಗಿದೆ. ವರಾಹಸಂದ್ರ, ಮಾದಾವರ, ಶ್ರೀಕಂಠಪುರ, ಗಂಗೊಂಡನಹಳ್ಳಿಯಲ್ಲಿ ನೈಸ್ನವರು ಜಮೀನು ಸ್ವಾಧೀನ ಮಾಡಿದ್ದರು. ಅಲ್ಲಿ ಜಮೀನುಗಳು ಇವೆ. ಅವರು ಅದನ್ನು ನಿವೇಶನ ಮಾಡಿ ರೈತರಿಗೆ ಕೊಡಬೇಕು. ಟೌನ್ಶಿಪ್ನಲ್ಲೇ ನೈಸ್ ಸಂಸ್ಥೆಯ ರೈತರಿಗೆ ಸೈಟ್ಗಳನ್ನು ಕೊಡಬೇಕು. ಎರಡು ತಿಂಗಳ ಒಳಗೆ ನೈಸ್ ಸಂಸ್ಥೆ ರೈತರಿಗೆ ನಿವೇಶನ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಚಿವ ಸಂಪುಟ ಸಭೆ ಮುಂದೆ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಾಯಿತು. 101 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಬರ ಮಾರ್ಗಸೂಚಿ ಅನ್ವಯ ಬರ ಘೋಷಣೆ ಮಾಡಲಾಗಿದೆ. ಮಳೆಯ ಪ್ರಮಾಣ, ತೇವಾಂಶ, ಬೀಜ ಬಿತ್ತನೆಯನ್ನು ಪರಿಗಣಿಸಿ ಬರ ಘೋಷಣೆ ಮಾಡಲಾಗಿದೆ. ಇನ್ನೂ 50-60 ತಾಲೂಕುಗಳನ್ನು ಇನ್ನೊಂದು ಹಂತದಲ್ಲಿ ಬರ ತಾಲೂಕು ಎಂದು ಘೋಷಣೆ ಮಾಡಲಾಗುವುದು. ಸೆಪ್ಟೆಂಬರ್ ವರೆಗೆ ಪರಿಶೀಲಿಸಿ ಹೊಸ ಬರ ತಾಲೂಕುಗಳನ್ನು ಪರಿಗಣಿಸಲಾಗುವುದು. ಎರಡು ವಾರದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಬರದ ನಷ್ಟ ಅಂದಾಜು ಮಾಡಲಾಗುತ್ತಿದೆ. ಎಷ್ಟು ಪರಿಹಾರ ಹಣ ಕೇಳಬೇಕು ಎಂಬುದನ್ನು ಅಂದಾಜಿಸಿ ಕೇಂದ್ರ ಗೃಹ ಸಚಿವರಿಗೆ ಮನವಿ ನೀಡುತ್ತೇವೆ. ಅವಕಾಶ ಸಿಕ್ಕರೆ ಪ್ರಧಾನಿ ಮೋದಿ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಈ ತಿಂಗಳಾಂತ್ಯಕ್ಕೆ ಪರಿಹಾರದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

