HomeLatest Newsದಕ್ಷಿಣ ಭಾರತದ ಕುಂಭಮೇಳ ಕೊಪ್ಪಳ ಗವಿಮಠ ಜಾತ್ರೆಗೆ ಕ್ಷಣಗಣನೆ: ಇಂದು ಸಂಜೆ ಮಹಾ ರಥೋತ್ಸವ!

ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳ ಗವಿಮಠ ಜಾತ್ರೆಗೆ ಕ್ಷಣಗಣನೆ: ಇಂದು ಸಂಜೆ ಮಹಾ ರಥೋತ್ಸವ!

ಕೊಪ್ಪಳ: ಇಡೀ ವಿಶ್ವವೇ ತಿರುಗಿ ನೋಡುವಂತಹ, ಭಕ್ತಿ ಮತ್ತು ಮಾನವೀಯತೆಯ ಸಂಗಮವಾದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ‘ಮಹಾ ರಥೋತ್ಸವ’ಕ್ಕೆ ಇಂದು (ಜನವರಿ 5, 2026) ಚಾಲನೆ ದೊರೆಯಲಿದೆ. ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯಾದ ಈ ಜಾತ್ರೆಗೆ ಈಗಾಗಲೇ ಲಕ್ಷಾಂತರ ಭಕ್ತ ಸಾಗರ ಹರಿದು ಬಂದಿದೆ.

ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿಯಾದ ಕೊಪ್ಪಳದ ಗವಿಮಠದ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಈ ಸಂಭ್ರಮದ ನಡುವೆ, ಪ್ರತಿ ವರ್ಷ ನಡೆಯುವ ಪಲ್ಲಕ್ಕಿ ಮಹೋತ್ಸವ ಮತ್ತು ರಥೋತ್ಸವದ ಹಿಂದೆ ಒಂದು ರೋಚಕವಾದ ಮತ್ತು ಭಕ್ತಿಪೂರ್ವಕವಾದ ಇತಿಹಾಸ ಅಡಗಿದೆ. ಅದುವೇ ‘ಜಡೆಗೌಡ್ರ ಮನೆತನ’ ಮತ್ತು ಗವಿಮಠಕ್ಕಿರುವ ಅವಿನಾಭಾವ ಸಂಬಂಧ.

ಸಿದ್ಧೇಶ್ವರರ ಜಡೆ ನೀಡಿದ ವರ
ಗವಿಮಠದ 11ನೇ ಪೀಠಾಧೀಪತಿಗಳಾಗಿದ್ದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಠಕ್ಕೆ ಬರುವ ಮೊದಲು ಮಂಗಾಳಪುರದ ಊರಗೌಡರ ಮನೆಯಲ್ಲಿ ಲಿಂಗಾನುಷ್ಠಾನದಲ್ಲಿ ಇರುತ್ತಿದ್ದರು. ಸ್ವಾಮಿಗಳು ಅಲ್ಲಿಂದ ಮಠಕ್ಕೆ ಹೊರಡುವ ಸಂದರ್ಭ ಬಂದಾಗ, ತಮ್ಮ ಜಡೆಯನ್ನೇ ಕತ್ತರಿಸಿ ಆ ಮನೆಯ ಗೌಡಸಾನಿಗೆ ಪ್ರಸಾದವಾಗಿ ನೀಡಿದ್ದರು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂತಾನ ಭಾಗ್ಯವಿಲ್ಲದಿದ್ದ ಆ ಗೌಡ ದಂಪತಿಗಳು, ಸ್ವಾಮಿಗಳ ಆ ಜಡೆಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಇದರ ಫಲವಾಗಿ ಅವರಿಗೆ ಗಂಡು ಮಗು ಜನಿಸುತ್ತದೆ. ಆ ಮಗುವಿಗೆ ‘ಜಡೇಗೌಡ’ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ಆ ಕುಟುಂಬವೇ ‘ಜಡೆಗೌಡ್ರ ಮನೆತನ’ ಎಂದು ಪ್ರಖ್ಯಾತಿಯಾಯಿತು.

ಸಂಪ್ರದಾಯದ ಮೆರವಣಿಗೆ
ಇಂದಿಗೂ ಆ ನಂಟು ಹಾಗೆಯೇ ಮುಂದುವರಿದಿದೆ. ಮಠದಲ್ಲಿ ಪೂಜೆಗೊಂಡ ಶ್ರೀ ಗವಿಸಿದ್ದೇಶ್ವರರ ಮೂರ್ತಿಯನ್ನು ಮೊದಲು ಜಡೆಗೌಡ್ರ ಮನೆಗೆ ತರಲಾಗುತ್ತದೆ. ಅಲ್ಲಿ ಶುಭ ಮುಹೂರ್ತದಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರವೇ, ಸಕಲ ವಾದ್ಯಗೋಷ್ಠಿಗಳೊಂದಿಗೆ ಕೊಪ್ಪಳ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಗವಿಮಠಕ್ಕೆ ಬರಮಾಡಿಕೊಳ್ಳಲಾಗುತ್ತದೆ.

ಬಸವ ಪಟ ಆರೋಹಣದೊಂದಿಗೆ ಚಾಲನೆ
ಜಾತ್ರಾ ಮಹೋತ್ಸವಕ್ಕೆ ಪ್ರತಿ ವರ್ಷ ‘ಬಸವ ಪಟ’ ಆರೋಹಣ ಮಾಡುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. ಸಂಪ್ರದಾಯದಂತೆ ಬನದ ಹುಣ್ಣಿಮೆಯ ದಿನದಂದು ಪಲ್ಲಕ್ಕಿ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತದೆ.

ಯಾರು ನೀಡಲಿದ್ದಾರೆ ಚಾಲನೆ?
ಈ ಬಾರಿಯ ರಥೋತ್ಸವದ ವಿಶೇಷವೆಂದರೆ, ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಮಹಾ ರಥಕ್ಕೆ ಚಾಲನೆ ನೀಡಲಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯ ಕೂಕನೂರು ತಾಲೂಕಿನ ಬಿನ್ನಾಳ ಗ್ರಾಮದವರಾದ ಇವರು, ಈ ಮಣ್ಣಿನ ಮಗನಾಗಿ ರಥೋತ್ಸವಕ್ಕೆ ಚಾಲನೆ ನೀಡುತ್ತಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.

ಇಂದಿನ ಪ್ರಮುಖ ಕಾರ್ಯಕ್ರಮಗಳು:
ಬೆಳಗ್ಗೆ 10.30: ಗವಿಮಠದ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಶ್ವಾನದಳ, ಕರಾಟೆ ಪ್ರದರ್ಶನ ಮತ್ತು ಕುಸ್ತಿ ಪಂದ್ಯಾವಳಿಗಳು.

ಸಂಜೆ 5.30: ಲಕ್ಷಾಂತರ ಭಕ್ತರ ‘ಹರ್ಷೋದ್ಗಾರ’ ಹಾಗೂ ‘ಗೋವಿಂದ’ ನಾಮಸ್ಮರಣೆಯೊಂದಿಗೆ ಮಹಾ ರಥೋತ್ಸವ.

ಸಂಜೆ 6.00: ಶ್ರೀಮಠದ ಕೈಲಾಸ ಮಂಟಪದಲ್ಲಿ ‘ಭಕ್ತ ಹಿತಚಿಂತನ ಸಭೆ’ ಹಾಗೂ ವಿವಿಧ ಮಠಾಧೀಶರಿಂದ ಆಶೀರ್ವಚನ.

ಸಾಂಸ್ಕೃತಿಕ ಹಬ್ಬ: ಹಿರಿಯ ನಟ ದತ್ತಣ್ಣ ಅವರ ಉಪಸ್ಥಿತಿ, ನೌಶಾದ್ ಮತ್ತು ನಿಶಾದ್ ಅವರಿಂದ ಜುಗಲ್ಬಂದಿ ಗಾಯನ ಹಾಗೂ ಬಿ. ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯೋತ್ಸವ.

ದಾಸೋಹದ ವಿಶೇಷ:

ಈ ವರ್ಷದ ಜಾತ್ರೆಯ ಮೊದಲ ದಿನವೇ ಭಕ್ತರಿಗೆ ಬಿಸಿಬಿಸಿ ‘ಬೆಲ್ಲದ ಜಿಲೇಬಿ‘ ಉಣಬಡಿಸಲಾಗುತ್ತಿದೆ. ಇನ್ನು ಎರಡನೇ ದಿನದಿಂದ ಮೆನು ಮತ್ತಷ್ಟು ಕುತೂಹಲಕಾರಿಯಾಗಿದೆ,ನಾಲಿಗೆ ಚಪ್ಪರಿಸುವ ಮಿರ್ಚಿ ಬಜ್ಜಿ,ಸಿಹಿಯಾದ ರವೆ ಉಂಡಿ,ಉತ್ತರ ಕರ್ನಾಟಕದ ಸ್ಪೆಷಲ್ ಶೆಂಗಾ ಹೋಳಿಗೆ,ಜೊತೆಗೆ ವಿವಿಧ ಬಗೆಯ ಸಿಹಿ ಪದಾರ್ಥಗಳು ಭಕ್ತರ ಮನ ಗೆಲ್ಲಲಿವೆ.

ಸಾಮಾಜಿಕ ಕಳಕಳಿಯ ಜಾತ್ರೆ:
ಗವಿಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಜಾತ್ರೆಯು ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ.

ಬೃಹತ್ ರಕ್ತದಾನ ಶಿಬಿರ: ಜ.5 ರಿಂದ 8 ರವರೆಗೆ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ.

ಫಲಪುಷ್ಪ ಪ್ರದರ್ಶನ: ಸಾಲುಮರದ ತಿಮ್ಮಕ್ಕನವರ ನೆನಪಿನಲ್ಲಿ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ.

ಕೃಷಿ ಮೇಳ: ಜ.5 ರಿಂದ 9 ರವರೆಗೆ ರೈತರಿಗಾಗಿ ಕೃಷಿ ಜ್ಞಾನದ ಮೇಳ.

ಭಕ್ತರೇ ನಡೆಸುವ ಹಬ್ಬ:
ಜಾತಿ-ಧರ್ಮದ ಹಂಗಿಲ್ಲದೆ, ಕಲ್ಮಶವಿಲ್ಲದ ಮನಸ್ಸಿನಿಂದ ಭಕ್ತರೇ ಸ್ವಯಂಪ್ರೇರಿತರಾಗಿ ನಡೆಸುವ ಈ ಜಾತ್ರೆ ದುಷ್ಟ ಮನಸ್ಸುಗಳಲ್ಲಿ ಬದಲಾವಣೆಯ ಬೀಜ ಬಿತ್ತುತ್ತಿದೆ. ಈಗಾಗಲೇ ಸಾವಿರಾರು ಭಕ್ತರು ಪಾದಯಾತ್ರೆ, ಎತ್ತಿನ ಬಂಡಿಗಳ ಮೂಲಕ ಮಠಕ್ಕೆ ಧಾವಿಸುತ್ತಿದ್ದು, ಇಡೀ ಕೊಪ್ಪಳ ನಗರವೇ ಕೇಸರಿಮಯವಾಗಿದೆ.

ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಬರುವ ಭಕ್ತರಿಗಾಗಿ ವಸತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular