ಕೊಪ್ಪಳ: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಆಚರಣೆಯನ್ನು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ ಅವರು ಹೇಳಿದರು.
ಅವರು ಸೋಮವಾರದಂದು ಎಸ್ಪಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಹಬ್ಬದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ 4 ಡಿವೈಎಸ್‌ಪಿ, 14 ಪಿಐ/ಸಿಪಿಐ, 27 ಪಿಎಸ್‌ಐ, 59 ಎಎಸ್‌ಐ ಹಾಗೂ 395 ಹೆಡ್ ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, 3 ಕೆಎಸ್‌ಆರ್‌ಪಿ ತುಕಡಿಗಳು, 10 ಡಿಎಆರ್ ತುಕಡಿಗಳು ಹಾಗೂ 500 ಗೃಹರಕ್ಷಕ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ 15 ರೌಡಿ ಹಾಗೂ ರೂಢಿಗತ ಅಪರಾಧಿಗಳನ್ನು ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಇರುವ ರೌಡಿಶೀಟರ್, ಕೋಮುಗೂಂಡಾ ಸೇರಿದಂತೆ ಒಟ್ಟು 1,177 ವ್ಯಕ್ತಿಗಳ ವಿರುದ್ಧ ತಾಲೂಕು ದಂಡಾಧಿಕಾರಿಗಳ ಸಮಕ್ಷಮ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.
ಜಿಲ್ಲೆಯಾದ್ಯಂತ 8,282 ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತಿದ್ದು, 735 ಸೂಕ್ಷ್ಮ ಪ್ರದೇಶಗಳ ಮೇಲೆ ಕಮಾಂಡ್ ಸೆಂಟರ್ ಮೂಲಕ 24 ಗಂಟೆಗಳ ಕಾಲ ನಿಗಾವಹಿಸಲಾಗುತ್ತಿದೆ. ಹೆಚ್ಚುವರಿ ಗಸ್ತಿಗಾಗಿ 20 ವಾಹನಗಳನ್ನು ನಿಯೋಜಿಸಲಾಗಿದ್ದು, ಪ್ರಮುಖ ಗಣೇಶ ವಿಸರ್ಜನಾ ದಿನಗಳಲ್ಲಿ 3 ಡ್ರೋನ್ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ನಡೆಸಲಾಗುವುದು.
ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಧಿಕಾರಿಗಳ ನೇತೃತ್ವದಲ್ಲಿ ಹಾಗೂ ಬೀಟ್ ಮಟ್ಟದಲ್ಲಿ ಒಟ್ಟು 138 ಶಾಂತಿ ಸಭೆಗಳನ್ನು ನಡೆಸಲಾಗಿದೆ. ಗಣೇಶ ವಿಸರ್ಜನೆಯ ಪ್ರಮುಖ ದಿನಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದಲ್ಲದೆ, ಕೊಪ್ಪಳ ನಗರ, ಗಂಗಾವತಿ ನಗರ ಹಾಗೂ ಕನಕಗಿರಿ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ಮೂಡಿಸುವ ಉದ್ದೇಶದಿಂದ ಪೊಲೀಸ್ ಪಥಸಂಚಲನ (ಫ್ಲ್ಯಾಗ್ ಮಾರ್ಚ್) ನಡೆಸಲಾಗಿದೆ.
ಗೌರಿ-ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಯಾವುದೇ ತುರ್ತು ಪರಿಸ್ಥಿತಿ ಅಥವಾ ಪ್ರಮುಖ ಮಾಹಿತಿಗಾಗಿ ಸಾರ್ವಜನಿಕರು 112 ಸಹಾಯವಾಣಿಗೆ ಕರೆ ಮಾಡುವಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹೇಮಂತ್ ಕುಮಾರ್, ಪಿ.ಐ ಸುರೇಶ್ ಡಿ, ಪಿ.ಎಸ್.ಐ ರೇವಣ್ಣ ಗುರಿಕಾರ್, ಸೇರಿದಂತೆ ಇತರೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಂಗಡಿಗಳ ಬೀಗ ಮುರಿದು ಕಳವು: ಕಾನೂನು ಸಂಘರ್ಷಕ್ಕೊಳಗಾದ ಬಾಲಕ ವಶಕ್ಕೆ
ಕೊಪ್ಪಳ: ನಗರದ ವಿವಿಧ ಕಿರಾಣಿ ಹಾಗೂ ಜನರಲ್ ಸ್ಟೋರ್‌ಗಳ ಬೀಗ ಮುರಿದು ಕಳವು ಹಾಗೂ ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಬ್ಬನನ್ನು ಕೊಪ್ಪಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ಆತನಿಂದ ₹60 ಸಾವಿರ ನಗದು ಹಾಗೂ ಕಳವಿಗೆ ಬಳಸಿದ್ದ ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಅವರು ತಿಳಿಸಿದರು.
ಅವರು ಸೋಮವಾರದಂದು ಎಸ್ಪಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸೆಪ್ಟೆಂಬರ್ 6ರಂದು ರಾತ್ರಿ ನಗರದ ತೆಗ್ಗಿನಕೇರಿಯ ಮಂಡಲಗೇರಿ ಕಾಂಪ್ಲೆಕ್ಸ್‌ನಲ್ಲಿರುವ ವೆಂಕಟೇಶ್ವರ ಕಿರಾಣಿ ಸ್ಟೋರ್‌ನ ಶಟರ್ ಕೀಲಿ ಮುರಿದು ಒಳ ಪ್ರವೇಶಿಸಿದ ಕಳ್ಳರು, ಕಬೋರ್ಡ್‌ನಲ್ಲಿದ್ದ ರೂ. 2.30 ಲಕ್ಷ ನಗದು ಹಣವನ್ನು ಕಳವು ಮಾಡಿದ್ದರು.
ಅದೇ ರೀತಿ ಸೆಪ್ಟೆಂಬರ್ 11ರಂದು ಬೆಳಗು ಮುಂಜಾನೆ 4 ಗಂಟೆಗೆ ಜೆ.ಪಿ. ಮಾರ್ಕೆಟ್‌ನ ಶ್ರೀ ವೀರಭದ್ರೇಶ್ವರ ಕಿರಾಣಿ ಅಂಗಡಿ ಹಾಗೂ ಆರ್.ಆರ್. ಜನರಲ್ ಸ್ಟೋರ್ ಗಳ ಬೀಗ ಮುರಿದು ನಗದು, ಬಾದಾಮಿ, ಏಲಕ್ಕಿ ಹಾಗೂ ರೂ.3000 ಹಾಗೂ ಒಂದು ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ ಮೊಬೈಲ್ ಎಸ್ -1 ಆಂಡ್ರಾಯ್ಡ್ ಮೊಬೈಲ್ ಸೇರಿದಂತೆ ಒಟ್ಟು 12,100 ರೂ. ಬೆಲೆ ಬಾಳುವ ವಿವಿಧ ವಸ್ತುಗಳನ್ನು ಕಳವು ಮಾಡಲಾಗಿತ್ತು. ನಗರದ ಮೆಹತಾ ಮಾರ್ಕೆಟ್, ಓಸಿಯಾ ಟ್ರೇಡರ್ಸ್ ಹಾಗೂ ಗೌರಿಶಂಕರ್ ಕಿರಾಣಿ ಅಂಗಡಿಗಳಲ್ಲಿಯೂ ಕಳವಿಗೆ ಯತ್ನಿಸಲಾಗಿತ್ತು.
ಈ ಸಂಬಂಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 121/2026 ಕಲಂ 331(4), 305 ಬಿಎನ್ ಎಸ್ ಹಾಗೂ ಗುನ್ನೆ ನಂಬರ್ 125/2026 ಕಲಂ 62,331(4), 305(5) ಬಿ ಎನ್ ಎಸ್ ರಡಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು ಸೆಪ್ಟೆಂಬರ್ 13ರಂದು ಬೆಳಗಿನ ಜಾವ ಹೊಸಪೇಟೆಯ ಜಂಬುನಾಥ ರಸ್ತೆ ಬೈಪಾಸ್‌ನಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದಿದ್ದು , ಅವರಿಂದ ₹60 ಸಾವಿರ ನಗದು ಹಾಗೂ ಕಳವಿಗೆ ಬಳಸಿದ್ದ ಸುಮಾರು ರೂ. 40 ಸಾವಿರ ಮೌಲ್ಯದ ಹೊಂಡಾ ಡಿಯೋ ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ.
ಬಾಲಕರನ್ನು ಕೊಪ್ಪಳ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ, ನ್ಯಾಯಾಲಯದ ಆದೇಶದಂತೆ ಬಳ್ಳಾರಿಯ ಬಾಲಕರ ಸರ್ಕಾರಿ ವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಸಾಹಿಲ್ ಬಾಗ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತ್ ಕುಮಾರ್ ಹಾಗೂ ಡಿವೈಎಸ್‌ಪಿ ಮುತ್ತಣ್ಣ ಪಿ. ಸರವಗೋಳ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ ಡಿ., ಪಿಎಸ್‌ಐ ಹೀರಪ್ಪ ನಾಯಕ, ಪಿಎಸ್ಐ ರೇವಣ್ಣ ಗುರಿಕಾರ, ಸಿಬ್ಬಂದಿಯಾದ ಮಂಜುನಾಥ್ ಸಿಪಿಸಿ 22, ಮಂಗಳೇಶ ಸಿಪಿಸಿ 459, ಗೂಡಸಾಬ್ ಸಿಪಿಸಿ 175, ತನಿಕಾ ಸಹಾಯಕರಾದ ಹನುಮಂತ ಹಕಾರಿ ಸಿ ಎಚ್ ಸಿ 207, ಕುಮಾರಸ್ವಾಮಿ ಸಿಂಪಡಿಸಿ 604, ಲಕ್ಷ್ಮಿ ದೇವಿ ಕೆ ಮಪಿ ಸಿ 24, ಅಧಿಕಾರಿ ಮತ್ತು ಸಿಬ್ಬಂದಿ ಯವರು ಶ್ರಮಿಸಿದ್ದು, ಪೊಲೀಸ್ ಸಿಬ್ಬಂದಿಯ ತಂಡ ಈ ಪ್ರಕರಣವನ್ನು ಭೇದಿಸಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹೇಮಂತ್ ಕುಮಾರ್, ಪಿ.ಐ ಸುರೇಶ್ ಡಿ, ಪಿ.ಎಸ್.ಐ ರೇವಣ್ಣ ಗುರಿಕಾರ್ , ಸೇರಿದಂತೆ ಇತರೆ ಪೊಲೀಸ್ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

