ಗದಗ: ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ ನೂರಾರು ಶಾಲಾ ಮಕ್ಕಳು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಹಲ್ಲಿಬಿದ್ದಿತ್ತು. ಹಲ್ಲಿಬಿದ್ದ ಬಿಸಿಯೂಟವನ್ನೇ ಮಕ್ಕಳಿಗೆ ಬಡಿಸಲಾಗಿದೆ. ಇದನ್ನು ಸೇವಿಸಿದ ಕೆಲವೇ ಸಮಯದಲ್ಲಿ ನೂರಾರು ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ. ಹಲವು ಮಕ್ಕಳು ಹೊಟ್ಟೆನೋವು, ವಾಂತಿ-ಬೇಧಿಯಿಂದ ಬಳಲುತ್ತಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ.
ಮಧ್ಯಾಹ್ನದ ಊಟದ ಬಳಿಕ ಮಕ್ಕಳು ಅಸ್ವಸ್ಥರಾಗಿರುದನ್ನು ಕಂಡು ಬಿಸಿಯೂಟ ಪರಿಶೀಲಿಸಿದಾಗ ಬಿಸಿಯೂಟದಲ್ಲಿ ಹಲ್ಲಿಬಿದ್ದಿತ್ತು ಎಂಬ ವಿಚಾರ ಬಯಲಾಗಿದೆ. ಊಟದಲ್ಲಿ ಸತ್ತಹಲ್ಲಿಯೊಂದು ಪತ್ತೆಯಾಗಿದೆ. ತಕ್ಷಣ ಅಸ್ವಸ್ಥ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆ ಬಳಿಕ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆ ಹಾಗೂ ಶಾಲೆಗೆ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

