ಲಾಸ್ ಏಂಜಲೀಸ್: ಕಿಂಗ್ ಆಫ್ ಪಾಪ್ ಮೈಕಲ್ ಜಾಕ್ಸನ್ ನಿಧನರಾಗಿ 16 ವರ್ಷಗಳೇ ಕಳೆದಿದ್ದರೂ, ಅವರ ಸುತ್ತಲಿನ ಲೈಂಗಿಕ ದೌರ್ಜನ್ಯದ ಆರೋಪಗಳು ಬೆಂಬಿಡದೆ ಕಾಡುತ್ತಿವೆ. ಇದೀಗ ಜಾಕ್ಸನ್ ಅವರ ‘ಎರಡನೇ ಕುಟುಂಬ’ ಎಂದೇ ಕರೆಯಲ್ಪಡುತ್ತಿದ್ದ ಕ್ಯಾಸಿಯೊ (Cascio) ಕುಟುಂಬದ ನಾಲ್ವರು ಮಕ್ಕಳು, ತಾವು ಬಾಲ್ಯದಲ್ಲಿ ಜಾಕ್ಸನ್ ಅವರಿಂದ ಸತತ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆವು ಎಂದು ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
ಯಾರು ಈ ದೂರುದಾರರು? ಎಡ್ವರ್ಡ್ (ಎಡ್ಡಿ) ಜೋಸೆಫ್ ಕ್ಯಾಸಿಯೊ, ಡೊಮಿನಿಕ್ ಸವಿನಿ ಕ್ಯಾಸಿಯೊ, ಮೇರಿ-ನಿಕೋಲ್ ಪೋರ್ಟೆ ಮತ್ತು ಆಲ್ಡೋ ಕ್ಯಾಸಿಯೊ ಎಂಬ ನಾಲ್ವರು ಒಡಹುಟ್ಟಿದವರು ಈ ದೂರು ನೀಡಿದ್ದಾರೆ. 1980ರ ದಶಕದಿಂದಲೂ ಈ ಕುಟುಂಬ ಜಾಕ್ಸನ್‌ಗೆ ಅತ್ಯಂತ ಆಪ್ತವಾಗಿತ್ತು. ಜಾಕ್ಸನ್ ಅವರ ನ್ಯೂಜೆರ್ಸಿ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು ಮತ್ತು ಈ ಮಕ್ಕಳನ್ನು ತಮ್ಮ ‘ಎರಡನೇ ಕುಟುಂಬ’ ಎಂದು ಕರೆಯುತ್ತಿದ್ದರು. ಕೆಲವು ಘಟನೆಗಳು ಮಕ್ಕಳಿಗೆ ಕೇವಲ 7 ಅಥವಾ 8 ವರ್ಷ ವಯಸ್ಸಿದ್ದಾಗಲೇ ಆರಂಭವಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಿಂದೆ ಬೆಂಬಲಿಸಿದ್ದವರು ಈಗ ತಿರುಗಿಬಿದ್ದಿದ್ದೇಕೆ? ವಿಶೇಷವೆಂದರೆ, 2010ರಲ್ಲಿ ಓಪ್ರಾ ವಿನ್‌ಫ್ರೇ ಅವರ ಶೋನಲ್ಲಿ ಭಾಗವಹಿಸಿದ್ದ ಇದೇ ಕ್ಯಾಸಿಯೊ ಕುಟುಂಬ, ಜಾಕ್ಸನ್ ಪರವಾಗಿ ಬ್ಯಾಟ್ ಬೀಸಿತ್ತು. ಜಾಕ್ಸನ್ ಅಮಾಯಕರು ಮತ್ತು ಅವರೊಂದಿಗೆ ನಮ್ಮದು ಪವಿತ್ರವಾದ ಸಂಬಂಧ ಎಂದು ಹೇಳಿದ್ದರು. ಆದರೆ, ಈಗ ಸಲ್ಲಿಸಿರುವ ದೂರಿನಲ್ಲಿ, “ಅಂದು ನಾವು ಜಾಕ್ಸನ್ ಅವರ ಪ್ರಭಾವಕ್ಕೊಳಗಾಗಿದ್ದೆವು (Groomed). ಅವರನ್ನು ರಕ್ಷಿಸಲು ತರಬೇತಿ ಪಡೆದ ‘ಸೈನಿಕರಂತೆ’ ಕೆಲಸ ಮಾಡಿದ್ದೆವು. 2019ರ ‘ಲೀವಿಂಗ್ ನೆವರ್‌ಲ್ಯಾಂಡ್’ ಸಾಕ್ಷ್ಯಚಿತ್ರ ನೋಡಿದ ನಂತರ ನಮಗೆ ನಮ್ಮ ಮೇಲಾದ ಅನ್ಯಾಯದ ಅರಿವಾಯಿತು” ಎಂದು ವಿವರಿಸಿದ್ದಾರೆ.
ಎಸ್ಟೇಟ್ ಕಡೆಯಿಂದ ‘ಹಣಕ್ಕಾಗಿ ಸಂಚು’ ಎಂಬ ಆರೋಪ ಮೈಕಲ್ ಜಾಕ್ಸನ್ ಅವರ ಆಸ್ತಿಯನ್ನು ನಿರ್ವಹಿಸುವ ಎಸ್ಟೇಟ್ (Estate) ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. “ಇದು ಕೇವಲ ಹಣ ಲೂಟಿ ಮಾಡುವ ಹತಾಶ ಪ್ರಯತ್ನ. 2020ರಲ್ಲಿ ಈ ಕುಟುಂಬಕ್ಕೆ ಈಗಾಗಲೇ ಸುಮಾರು 16 ಮಿಲಿಯನ್ ಡಾಲರ್ ಹಣವನ್ನು ಒಪ್ಪಂದದ ಭಾಗವಾಗಿ ನೀಡಲಾಗಿದೆ. 2025ರಲ್ಲಿ ಆ ಹಣದ ಪಾವತಿ ನಿಂತ ತಕ್ಷಣ ಅವರು ಈ ಹೊಸ ನಾಟಕ ಆರಂಭಿಸಿದ್ದಾರೆ” ಎಂದು ಎಸ್ಟೇಟ್ ಪರ ವಕೀಲರು ವಾದಿಸಿದ್ದಾರೆ.
ಕಾನೂನು ಹೋರಾಟದ ಮುಂದಿನ ಹಂತ 2026ರ ಫೆಬ್ರವರಿಯಲ್ಲಿ ಲಾಸ್ ಏಂಜಲೀಸ್ ಫೆಡರಲ್ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದೆ. ಆದರೆ, ಹಳೆಯ ಒಪ್ಪಂದಗಳ ಪ್ರಕಾರ ಈ ಪ್ರಕರಣವನ್ನು ಬಹಿರಂಗ ನ್ಯಾಯಾಲಯದ ಬದಲಿಗೆ ಖಾಸಗಿ ಮಧ್ಯಸ್ಥಿಕೆ (Arbitration) ಮೂಲಕ ಬಗೆಹರಿಸಲು ನ್ಯಾಯಾಲಯ ಸೂಚಿಸಿದೆ. ಮತ್ತೊಂದೆಡೆ, ಮೈಕಲ್ ಜಾಕ್ಸನ್ ಅವರ ಜೀವನದ ಆಧಾರಿತ ‘ಮೈಕಲ್’ ಎಂಬ ಬಯೋಪಿಕ್ ಈಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಇಂತಹ ಸಮಯದಲ್ಲೇ ಈ ಗಂಭೀರ ಆರೋಪಗಳು ಕೇಳಿಬಂದಿರುವುದು ಅವರ ಪರಂಪರೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

