HomeKarnatakaಕಾರ್ಮಿಕರಿಗೆ ಗುಡ್ ನ್ಯೂಸ್: ಹೊಸ ಕನಿಷ್ಠ ವೇತನ ಜಾರಿ ಬಗ್ಗೆ ಸಚಿವ ಸಂತೋಷ್ ಲಾಡ್ ಮಾಹಿತಿ

ಕಾರ್ಮಿಕರಿಗೆ ಗುಡ್ ನ್ಯೂಸ್: ಹೊಸ ಕನಿಷ್ಠ ವೇತನ ಜಾರಿ ಬಗ್ಗೆ ಸಚಿವ ಸಂತೋಷ್ ಲಾಡ್ ಮಾಹಿತಿ

ಬಳ್ಳಾರಿ: ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ, ಕಾರ್ಮಿಕರ ಆಹಾರ, ಬಟ್ಟೆ ಮತ್ತು ವಸತಿ ಅಗತ್ಯತೆಗಳನ್ನು ಪರಿಗಣಿಸಿ, ಚರ್ಚಿಸಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಕಾರ್ಮಿಕ  ಸಚಿವ ಸಂತೋಷ್ ಎಸ್.ಲಾಡ್ ಅವರು ಹೇಳಿದರು.

ಸಂಡೂರು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಂಡೂರು ತಾಲ್ಲೂಕಿನ ತಾಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ-2 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರ ಏಳಿಗೆಗೆ ಬದ್ಧವಾಗಿದ್ದು, ಅಂಬೇಡ್ಕರ್ ಸಹಾಯಹಸ್ತ ಕಾರ್ಯಕ್ರಮದ ಮೂಲಕ ವಿವಿಧ ಅಸಂಘಟಿತ ವಲಯಗಳ ಜನರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮೆಜಾನ್, ಜೊಮ್ಯಾಟೊ, ಸ್ವಿಗ್ಗಿ ಮುಂತಾದ ಆನ್‌ಲೈನ್ ಕಂಪನಿಗಳಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್‌ಗಳ ಹಿತರಕ್ಷಣೆಗಾಗಿ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಗಿಗ್ ವರ್ಕರ್ಸ್ ಬಿಲ್ ಕಾನೂನು ತರಲಾಗಿದೆ. ಚಾಲಕರು ಮತ್ತು ಕ್ಲೀನರ್‌ಗಳ ಹಿತದೃಷ್ಟಿಯಿಂದ ಸ್ಮಾರ್ಟ್ ಕಾರ್ಡ್ ವಿತರಿಸುವ ಟ್ರಾನ್ಸ್ಪೋರ್ಟ್ ಬಿಲ್ ಯೋಜನೆ ಜಾರಿಯಲ್ಲಿದೆ. ಅದರಂತೆ ಚಿತ್ರರಂಗದ ಕಾರ್ಮಿಕರು ಹಾಗೂ ಮನೆಗೆಲಸ ಮಾಡುವ ಮಹಿಳೆಯರ ಸಾಮಾಜಿಕ ಭದ್ರತೆಗಾಗಿ ಸಿನಿ ಬಿಲ್ ಮತ್ತು ಡೊಮೆಸ್ಟಿಕ್ ಬಿಲ್ ನಂತಹ ಹೊಸ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

 ಇಡೀ ದೇಶದಲ್ಲೇ ಇಂತಹ ಬೃಹತ್ ಜನಪರ ಯೋಜನೆಗಳು ಎಲ್ಲಿಯೂ ಇಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ ಸುಮಾರು 60,000 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಐದು ವರ್ಷಕ್ಕೆ ಇದು ಸುಮಾರು 3 ಲಕ್ಷ ಕೋಟಿ ರೂಪಾಯಿಗಳಾಗುತ್ತದೆ ಎಂದು ತಿಳಿಸಿದರು.

 ನಾವು ನಮ್ಮ ಮಕ್ಕಳಿಗೆ ಸ್ಥಳೀಯ ಮಾತ್ರವಲ್ಲದೆ, ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಹುಡುಕಬೇಕು. ಸ್ಥಳೀಯರಿಗೆ ಉದ್ಯೋಗ ಕೊಡಿಸುವಲ್ಲಿ ನಾವು ನಮ್ಮ ಪ್ರಯತ್ನವನ್ನು ಮುಂದುವರಿಸುತ್ತೇವೆ. ಅಗತ್ಯವಾದಲ್ಲಿ ಈ ಭಾಗದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಸಚಿವರು ಹೇಳಿದರು.

 ಸಂಡೂರು ವಿಧಾನಸಭೆ ಕ್ಷೇತ್ರದ ಶಾಸಕರಾದ ಈ.ಅನ್ನಪೂರ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಡೂರು ತಾಲ್ಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ತಾಲೂಕಿನ ಒಟ್ಟು 175 ಶಾಲೆಗಳ ಪೈಕಿ 65 ಶಾಲೆಗಳನ್ನು ‘ಮಾದರಿ ಶಾಲೆ’ಗಳನ್ನಾಗಿ ರೂಪಿಸಲಾಗಿದೆ. ಉಳಿದ 110 ಶಾಲೆಗಳ ಅಭಿವೃದ್ಧಿಗಾಗಿ ಈಗಾಗಲೇ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ. ಅಂಗನವಾಡಿಯಿAದ ಸ್ನಾತಕೋತ್ತರ ಪದವಿಯವರೆಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಬಳ್ಳಾರಿ ಲೋಕಸಭೆ ಕ್ಷೇತ್ರದ ಸಂಸದ ಈ.ತುಕಾರಾಮ್ ಅವರು ಮಾತನಾಡಿ, ಎರಡನೇ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ ಈ ಕಾರ್ಯಕ್ರಮವು ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ವ್ಯವಸ್ಥೆ ಮತ್ತು ಕಳೆದ ಎರಡು ದಶಕಗಳಲ್ಲಿ ಸಂಡೂರು ತಾಲ್ಲೂಕಿನಲ್ಲಿ ನಡೆದ ಅಭಿವೃದ್ಧಿ ಪಥವನ್ನು ಬಿಂಬಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ್ ಅ.ಶಿಂಧಿಹಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಸಂಘಟಿತ ವಲಯದ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರವು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕ ಸಚಿವರ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕರ ಕನಸುಗಳಿಗೆ ಆಸರೆಯಾಗಿ ನಿಂತಿದೆ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮೋಟಾರ್ ಸಾರಿಗೆ ಮತ್ತು ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು ಹಾಗೂ ಸಂಡೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೊಳಿಸಲಾಯಿತು. ಫಲಾನುಭವಿಗಳಿಗೆ ಸೌಲಭ್ಯ ಹಂಚಿಕೆ ಮತ್ತು ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು.

ಆಕರ್ಷಿಸಿದ ಮಾಹಿತಿ ಮಳಿಗೆಗಳು:

 ಕಾರ್ಯಕ್ರಮದ ಆವರಣದಲ್ಲಿ ವಿವಿಧ ಇಲಾಖೆಗಳ ಯೋಜನೆಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ಕುರಿತ ಮಾಹಿತಿ ನೀಡುವ ಮಳಿಗೆಗಳನ್ನು ಹಾಕಲಾಗಿತ್ತು. ವೇದಿಕೆಯಲ್ಲಿ ಸಂಡೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಬಹುಗ್ರಾಮ ಕುಡಿಯುವ ನೀರು, ಶಿಕ್ಷಣ, ವಸತಿ, ರಸ್ತೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ, ಕೈಗೊಂಡ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಚಿತ್ರಣ ಒಳಗೊಂಡ ವಿಡಿಯೋ ತುಣುಕು ಪ್ರದರ್ಶಿಸಲಾಯಿತು. ಬಳಿಕ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು.

 ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ಉಪಾಧ್ಯಕ್ಷ ಹೆಚ್.ಲಕ್ಷö್ಮಣ್, ಮಾಜಿ ವಿಧಾನಪರಿಷತ್ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಷಯ ಲಾಡ್, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ,  ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ಸಂಡೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನೂರುದ್ದೀನ್.ಎಸ್., ಸಂಡೂರು ತಹಶೀಲ್ದಾರ ಅನಿಲ್ ಕುಮಾರ್.ಜಿ, ಸಂಡೂರು ತಾಪಂ ಇಓ ಮಡಗಿನ ಬಸಪ್ಪ, ಬಳ್ಳಾರಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರು ಸೇರಿದಂತೆ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular