ನವದೆಹಲಿ : ಎನ್ಸಿಪಿ (NCP-SCP) ಮುಖ್ಯಸ್ಥ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ಶರದ್’ಪವಾರ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸೋಮವಾರ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಚೇತರಿಕೆಗೆ ಹಾರೈಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದ ಎನ್ಸಿಪಿ (NCP) ನಾಯಕ ಶರದ್ ಪವಾರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕರೆ ಮಾಡಿ ಆರೋಗ್ಯ ವಿಚಾರಿಸಿದರು.
ಪುಣೆಯ ರೂಬಿ ಹಾಲ್ ಕ್ಲಿನಿಕ್ನ ವೈದ್ಯ ಮತ್ತು ಟ್ರಸ್ಟಿ ಆಗಿರುವ ಡಾ. ಸೈಮನ್ ಗ್ರಾಂಟ್ ಅವರು ಮಂಗಳವಾರ ಮಾಹಿತಿ ನೀಡಿ, ಶರದ್ ಪವಾರ್ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶರದ್ ಪವಾರ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಮತ್ತು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.ದಾಖಲಾಗುವ ಸಮಯದಲ್ಲಿ ಇದ್ದ ಸಣ್ಣ ಅಸ್ವಸ್ಥತೆ ಈಗ ಕಡಿಮೆಯಾಗಿದೆ.ರಕ್ತದೊತ್ತಡ ಮತ್ತು ಇತರ ವೈದ್ಯಕೀಯ ನಿಯತಾಂಕಗಳು (Vital Parameters) ಸಾಮಾನ್ಯ ಸ್ಥಿತಿಯಲ್ಲಿವೆ.ಮುನ್ನೆಚ್ಚರಿಕೆ ಕ್ರಮವಾಗಿ ಇನ್ನೂ ಕೆಲವು ದಿನಗಳ ಕಾಲ ಅವರನ್ನು ತಜ್ಞ ವೈದ್ಯರ ವೀಕ್ಷಣೆಯಲ್ಲಿ ಇರಿಸಲಾಗುವುದು. ರೂಬಿ ಹಾಲ್ ಕ್ಲಿನಿಕ್ನ ವೈದ್ಯಕೀಯ ಪ್ರೋಟೋಕಾಲ್ಗಳ ಪ್ರಕಾರವೇ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಎಲ್ಲಾ ತಪಾಸಣೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಮುಂದಿನ ಹಂತದ ಚಿಕಿತ್ಸೆಯ ಬಗ್ಗೆ ಅವರ ಚೇತರಿಕೆಯ ಪ್ರಗತಿಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು,” ಎಂದು ಡಾ. ಗ್ರಾಂಟ್ ತಿಳಿಸಿದ್ದಾರೆ.

