ಬೆಂಗಳೂರು: ಮಕ್ಕಳಿಲ್ಲವೆಂದು ಅದೆಷ್ಟೋ ದಂಪತಿಗಳು ಪರಿತಪಿಸುತ್ತಾರೆ. ದೇವರ ಮೊರೆ ಹೋಗುವುದು, ನೂರಾರು ಹರಕೆಗಳನ್ನು ಹೊತ್ತು ಮಗುವಿಗಾಗಿ ಹಂಬಲಿಸುವ ಅದೇಷ್ಟೋ ಕುಟುಂಬಗಳಿವೆ. ಆದರೆ ಇಲ್ಲೊಂದು ಘಟನೆಯಲ್ಲಿ ಪೋಷಕರಿಗೆ ಹೆತ್ತ ಕಂದಮ್ಮನೇ ಬೇಡವಾಗಿ ಹೋಗಿದೆ. ಹುಟ್ಟಿದ ಒಂದು ದಿನದ ಶಿಶುವನ್ನು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆಯುವ ಮುನ್ನ ಹೆತ್ತ ತಾಯಿಗೆ ಕರುಳಬಳ್ಳಿಯ ಕೂಗು ಕೇಳಿದಂತಿಲ್ಲ, ಅದೆಂತಹ ಕಲ್ಲು ಹೃದಯ….. ಕಿಂಚಿತ್ತೂ ಮನುಷತ್ವವೂ ಇಲ್ಲದಂತೆ ಕಂದಮ್ಮನನ್ನು ಕಸದ ತಿಟ್ಟಿಯಲ್ಲಿ ಬಿಟ್ಟು ಹೋಗಿದ್ದಾರೆ. ರಾಜ್ಯ ರಾಧಾನಿ ಬೆಂಗಳೂರಿನಲ್ಲಿ ಇಂತದ್ದೊಂದು ದಾರುಣ ಘಟನೆ ನಡೆದಿದೆ. ಶೇಷಾದ್ರಿಪುರಂ ರಲ್ವೆ ಪಾರ್ಲರ್ ರಸ್ತೆಯಲ್ಲಿ ಕಸದ ತೊಟ್ಟಿಯಲ್ಲಿ ಒಂದು ದಿನದ ಶಿಶುವಿನ ಶವ ಪತ್ತೆಯಾಗಿದೆ.
ಒಂದು ದಿನದ ಗಂಡು ಮಗುವನ್ನು ಹೆತ್ತವರು ಕಸದ ತೊಟ್ಟಿಗೆ ಬಿಸಾಕಿ ಹೋಗಿದ್ದಾರೆ. ಇಂದು ಮುಂಜಾನೆ ಸ್ಥಳೀಯರು ಇದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಶೇಷಾದ್ರಿಪುರಂ ಠಾಣೆ ಪೊಲೀಸರು ನವಜಾತ ಮಗುವಿನ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವಜಾತ ಶಿಶುವಿನ ಪೋಷಕರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.

