ಬಿಹಾರದ ಪವಿತ್ರ ಯಾತ್ರಾಸ್ಥಳ ಬೋಧಗಯಾಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರೊಬ್ಬರು ಅಲ್ಲಿನ ಜನರ ಜೀವನಮಟ್ಟ ಕಂಡು ಭಾವುಕರಾಗಿದ್ದಾರೆ. ಸುಮಾರು 2,500 ವರ್ಷಗಳ ಹಿಂದೆ ಗೌತಮ ಬುದ್ಧ ಜ್ಞಾನೋದಯ ಪಡೆದ ಈ ಪುಣ್ಯಕ್ಷೇತ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಮಹಿಳೆಗೆ, ದೇವಸ್ಥಾನದ ಹೊರಗಿನ ಪರಿಸ್ಥಿತಿ ಕಂಡು ತೀವ್ರ ಆಘಾತವಾಗಿದೆ.
ನಿರೀಕ್ಷೆಯೂ ಬೇರೆ ವಾಸ್ತವವೇ ಬೇರೆ ಮಹಾಬೋಧಿ ದೇವಾಲಯದಲ್ಲಿ ನಡೆಯುವ ದತ್ತಿ ಕಾರ್ಯಕ್ರಮವೊಂದರಲ್ಲಿ ಸ್ವಯಂಸೇವಕಿಯಾಗಿ ಭಾಗವಹಿಸಲು ಬಂದಿದ್ದ ಈ ಮಹಿಳೆ, ದೇವಾಲಯದ ಆವರಣದ ಶಾಂತಿಯುತ ವಾತಾವರಣ ನೋಡಿ ಸಂತಸಪಟ್ಟಿದ್ದರು. ಆದರೆ ದೇವಾಲಯದ ಸುತ್ತಮುತ್ತಲಿನ ರಸ್ತೆಗಳು ಮತ್ತು ಅಲ್ಲಿನ ಜನರ ಬಡತನ ಅವರನ್ನು ಬೆಚ್ಚಿಬೀಳಿಸಿದೆ. ರಸ್ತೆಯಲ್ಲಿ ನಡೆಯಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ಕಂಡ ಅವರು, “ಈ ರಸ್ತೆಗಳು ಸಮತಟ್ಟಾಗಿಲ್ಲ, ಇಲ್ಲಿನ ಜನರ ಸ್ಥಿತಿ ಕಂಡು ನನಗೆ ಅಳು ತಡೆಯಲು ಸಾಧ್ಯವಾಗುತ್ತಿಲ್ಲ” ಎಂದು ವಿಡಿಯೋದಲ್ಲಿ ಕಣ್ಣೀರು ಹಾಕಿದ್ದಾರೆ.
ಮಕ್ಕಳ ಸ್ಥಿತಿ ಕಂಡು ಮರುಗಿದ ಪ್ರವಾಸಿಗಿ ರಸ್ತೆ ಬದಿಯ ಗುಡಿಸಲುಗಳು, ಬರಿಗಾಲಿನಲ್ಲಿ ನಡೆಯುವ ಮಕ್ಕಳು ಹಾಗೂ ಹಸಿವಿನಿಂದ ಬಳಲುತ್ತಿರುವ ಪ್ರಾಣಿಗಳ ದೃಶ್ಯಗಳನ್ನು ಅವರು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. “ಮೂರೂವರೆ ವರ್ಷದ ಪುಟ್ಟ ಮಕ್ಕಳು ಶಾಲೆಯಲ್ಲಿ ಇರಬೇಕಾದ ವಯಸ್ಸಿನಲ್ಲಿ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಒಂದು ಪುಟ್ಟ ಮಗು ಹಗ್ಗದ ಮೇಲೆ ನಡೆದು ಅಪಾಯಕಾರಿ ಸಾಹಸ ಪ್ರದರ್ಶಿಸಿ ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನೋವಿನ ಸಂಗತಿ. ಕಸದ ವಸ್ತುಗಳಿಂದ ನಿರ್ಮಿಸಿದ ಮೇಲ್ಛಾವಣಿಯಡಿ ಜನರು ವಾಸಿಸುತ್ತಿದ್ದಾರೆ. ಇದೇ ಅವರ ದಿನನಿತ್ಯದ ಬದುಕು ಎಂಬುದು ಅತ್ಯಂತ ದುರದೃಷ್ಟಕರ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೋಧಗಯಾದ ನಿವಾಸಿಗಳ ಹೋರಾಟದ ಬದುಕಿನ ಬಗ್ಗೆ ಜಗತ್ತಿನ ಗಮನ ಸೆಳೆಯಲು ಮತ್ತು ಅವರಿಗೆ ನೆರವು ನೀಡುವ ಉದ್ದೇಶದಿಂದ ಈ ವಿಡಿಯೋ ಮಾಡಿರುವುದಾಗಿ ಅವರು ಹೇಳಿದ್ದಾರೆ. ಪವಿತ್ರ ಕ್ಷೇತ್ರವೊಂದರ ಸುತ್ತಮುತ್ತಲಿನ ಇಂತಹ ಕಠಿಣ ಪರಿಸ್ಥಿತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

