HomeIndiaBig Breaking: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಮಾರ್ಗ, ದರ ಘೋಷಣೆ

Big Breaking: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಮಾರ್ಗ, ದರ ಘೋಷಣೆ

ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಸಂಚಾರದ ಮಾರ್ಗ, ದರವನ್ನು ಘೋಷಣೆ ಮಾಡಲಾಗಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ.

ಎರಡು ದಿನಗಳ ಹಿಂದೆ ರೈಲ್ವೆ ಸುರಕ್ಷತಾ ಆಯುಕ್ತರು ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ವಂದೇ ಭಾರತ್‌ ಸ್ಲೀಪರ್‌ ರೈಲಿನ ಅಂತಿಮ ಹೈಸ್ಪೀಡ್‌ ಪ್ರಯೋಗವನ್ನು ಕೋಟಾ-ನಾಗ್ಡಾ ವಿಭಾಗದಲ್ಲಿ ಯಶಸ್ವಿಯಾಗಿ ನಡೆಸಿದ್ದರು.

ಗುರುವಾರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಅವರು ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಸಂಚಾರದ ಮಾರ್ಗವನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ವಂದೇ ಭಾರತ್‌ ಸ್ಲೀಪರ್‌ ರೈಲು ಸಂಚಾರ ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ ಮಾರ್ಗದಲ್ಲಿ ರೈಲು?; ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಗೌಹಾತಿ-ಕೋಲ್ಕತ್ತಾ ಮಾರ್ಗದಲ್ಲಿ ಸಂಚಾರವನ್ನು ನಡೆಸಲಿದೆ. 15-20 ದಿನಗಳ ಅವಧಿಯಲ್ಲಿ ರೈಲು ಸಂಚಾರದ ದಿನಾಂಕವು ಅಂತಿಮವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಜನವರಿ 20ರೊಳಗೆ ರೈಲು ಸಂಚಾರವನ್ನು ಆರಂಭಿಸಲಿದೆ ಎಂದು ಗುರುವಾರ ಪ್ರಕಟಿಸಲಾಗಿದೆ.

ವಂದೇ ಭಾರತ್‌ ಸ್ಲೀಪರ್‌ ರೈಲಿನಲ್ಲಿ ಗೌಹಾತಿ-ಕೋಲ್ಕತ್ತಾ (ಹೌರಾ) ನಡುವಿನ ಪ್ರಯಾಣ ದರ 3ಎಸಿ ರೂ. 2,300 (ಆಹಾರ ಸೇರಿ), 2ಎಸಿಯಲ್ಲಿ 3,000 ರೂ. ಮತ್ತು ಮೊದಲ ದರ್ಜೆ ಎಸಿ ಬೋಗಿಯಲ್ಲಿ 3,600 ರೂ. ಇರಲಿದೆ.

2024ರ ಅಂತ್ಯದಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲು ಬೋಗಿಯ ವಿನ್ಯಾಸವನ್ನು ಲೋಕಾರ್ಪಣೆ ಮಾಡಲಾಗಿತ್ತು. ಹಲವಾರು ಪ್ರಾಯೋಗಿಕ ಪರೀಕ್ಷೆಗಳು, ಬೋಗಿಯ ವಿನ್ಯಾಸ ಬದಲಾವಣೆ ಬಳಿಕ ಈಗ ರೈಲ್ವೆ ಸುರಕ್ಷತಾ ಆಯುಕ್ತರು ಗಂಟೆಗೆ 180 ಕಿ.ಮೀ.ವೇಗದಲ್ಲಿ ರೈಲನ್ನು ಓಡಿಸಿ, ಪ್ರಾಯೋಗಿಕ ಸಂಚಾರ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡುವುದು ಮಾತ್ರ  ಬಾಕಿ ಇದ್ದು, ರೈಲ್ವೆ ಸುರಕ್ಷತಾ ಆಯುಕ್ತರು ಪ್ರಮಾಣ ಪತ್ರ ನೀಡಿದ ಬಳಿಕ ಅಧಿಕೃತವಾಗಿ ವಂದೇ ಭಾರತ್‌ ಸ್ಲೀಪರ್‌ ರೈಲು ಸಂಚಾರದ ದಿನಾಂಕ ನಿಗದಿಯಾಗಲಿದೆ.

ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, “ಸಾಮಾನ್ಯವಾಗಿ ಗೌಹಾತಿ-ಹೌರಾ ಮಾರ್ಗದಲ್ಲಿ ವಿಮಾನ ದರವು 6,000 ದಿಂದ 8,000 ರೂಪಾಯಿಗಳವರೆಗೆ ಇರುತ್ತದೆ ಮತ್ತು ಕೆಲವೊಮ್ಮೆ 10,000 ರೂಪಾಯಿಗಳನ್ನೂ ತಲುಪುತ್ತದೆ. ಆದರೆ ಈಗ ಗೌಹಾತಿ-ಹೌರಾ ತನಕ ವಂದೇ ಭಾರತ್ ಸ್ಲೀಪರ್ ರೈಲಿನ 3AC ದರವು ಸರಿಸುಮಾರು 2,300 ರೂಪಾಯಿಗಳಾಗಿದ್ದು (ಆಹಾರದೂ ಸೇರಿದಂತೆ) ಇದು ಕೈಗೆಟುಕುವಂತಿದೆ. 2AC ದರವು ಸುಮಾರು 3,000 ರೂಪಾಯಿಗಳಾಗಿದ್ದರೆ, ಮೊದಲ ದರ್ಜೆ ದರವು 3,600 ರೂಪಾಯಿಗಳಾಗಿರುತ್ತದೆ” ಎಂದು ತಿಳಿಸಿದರು.

“ವಂದೇ ಭಾರತ್ ಸ್ಲೀಪರ್ ರೈಲಿನ ಸಂಪೂರ್ಣ ಪರೀಕ್ಷೆ ಮತ್ತು ಪ್ರಮಾಣೀಕರಣ ಪ್ರಕ್ರಿಯೆಯು ಪೂರ್ಣಗೊಂಡಿದೆ. ಇದರ ಮೊದಲ ಮಾರ್ಗವನ್ನು ಗೌಹಾತಿ-ಕೋಲ್ಕತ್ತಾ ಎಂದು ಪ್ರಸ್ತಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾರ್ಗದಲ್ಲಿ ರೈಲಿಗೆ ಚಾಲನೆ ನೀಡಲಿದ್ದಾರೆ” ಎಂದರು.

“ಈ ಸಾಧನೆಯು ಒಂದು ಪ್ರಮುಖ ಮೈಲಿಗಲ್ಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳು, ಸುರಕ್ಷತೆ ಮತ್ತು ರಾತ್ರಿ ವೇಳೆಯ ಪ್ರಯಾಣದಲ್ಲಿ ಆಧುನಿಕ ಅನುಭವವನ್ನು ನೀಡಲಿದೆ” ಎಂದು ಹೇಳಿದರು.

ಪ್ರಾಯೋಗಿಕ ಸಂಚಾರದ ಅವಧಿಯಲ್ಲಿ ಕಂಪನಗಳು, ಬ್ರೇಕಿಂಗ್‌ ಕಾರ್ಯಕ್ಷಮತೆ, ತುರ್ತು ಬ್ರೇಕಿಂಗ್‌ ವ್ಯವಸ್ಥೆ, ಸುರಕ್ಷತಾ ವ್ಯವಸ್ಥೆಗಳು ಮತ್ತು ಇತರ ಅಂಶಗಳ ಮೌಲ್ಯಮಾಪನ ಮಾಡಲಾಗಿದೆ. ಹೆಚ್ಚಿನ ವೇಗದಲ್ಲಿ ರೈಲು ಸಾಗುವಾಗ ಅದರ ಕಾರ್ಯಕ್ಷಮತೆ ಸಂಪೂರ್ಣವಾಗಿ ತೃಪ್ತಿಕರವಾಗಿದೆ ಸಿಆರ್‌ಎಸ್‌ ಪರಿಶೀಲನೆ ಬಳಿಕ ಘೋಷಣೆ ಮಾಡಲಾಗಿದೆ.

16 ಬೋಗಿಗಳ ವಂದೇ ಭಾರತ್‌ ಸ್ಲೀಪರ್‌ ರೈಲು ಬೋಗಿ ದೂರದ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲಿದೆ. ಆರಾಮದಾಯಕ ಸ್ಲೀಪರ್‌ ಬರ್ತ್‌ಗಳು, ಸುಧಾರಿತ ಸಸ್ಪೆನ್ಷನ್‌ ಸಿಸ್ಟಮ್‌ಗಳು, ಸ್ವಯಂಚಾಲಿತ ಬಾಗಿಲುಗಳು, ಆಧುನಿಕ ಶೌಚಾಲಯಗಳು, ಅಗ್ನಿಶಾಮಕ ಪತ್ತೆ ಮತ್ತು ಸುರಕ್ಷತಾ ಮೇಲ್ವಿಚಾರಣಾ ವ್ಯವಸ್ಥೆಗಳು, ಸಿಸಿಟಿವಿ ಆಧಾರಿತ ಕಣ್ಗಾವಲು, ಡಿಜಿಟಲ್‌ ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳನ್ನು ರೈಲು ಹೊಂದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular