ಬೆಂಗಳೂರು : ಆಧಾರ್ ಗುರುತಿನ ವಿವರಗಳನ್ನು ಆಫ್ಲೈನ್ ಪರಿಶೀಲನೆಗಾಗಿ “Aadhaar QR Code Scanner” ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ರಾಜ್ಯದ ಎಲ್ಲಾ ಪೊಲೀಸರಿಗೆ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, ಉಲ್ಲೇಖಿತ (1) & (2) ರ ಪತ್ರದಲ್ಲಿ ತಿಳಿಸಿರುವಂತೆ, ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರವು (UIDAI) ಗುರುತಿನ ಪರಿಶೀಲನಾ ಪ್ರಕ್ರಿಯೆಯನ್ನು ಬಲಪಡಿಸಲು ಮತ್ತು ಸೇವೆಗಳನ್ನು ಒದಗಿಸುವಾಗ ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು, ಅಧಿಕೃತವಾಗಿ ಬಿಡುಗಡೆ ಮಾಡಿರುವ “Aadhaar QR Code Scanner” ಎಂಬ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಆಧಾರ್ ಗುರುತಿನ ಚೀಟಿಯಲ್ಲಿನ ವ್ಯಕ್ತಿಯ ಪ್ರಾಥಮಿಕ ವಿವರಗಳು ಮತ್ತು ಛಾಯಾಚಿತ್ರವನ್ನು ಪರಿಶೀಲಿಸಬಹುದು. ಈ ಅಪ್ಲಿಕೇಶನ್ Android ಹಾಗೂ iOS ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದ್ದು, ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಆಫ್ಲೈನ್ನಲ್ಲಿ ಪರಿಶೀಲನೆ ನಡೆಸಬಹುದು.
ಇದಲ್ಲದೆ, ಮಾನ್ಯ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಉಲ್ಲೇಖ (3) ರ 16 ನೇ UIDIC ಸಮಿತಿ ಸಭೆಯಲ್ಲಿಯೂ ಸಹ ಆಧಾರ್ ಗುರುತಿನ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಆಧಾರ್ ಆಫ್ಲೈನ್ ಪರಿಶೀಲನೆಗಾಗಿ “Aadhaar QR Code Scanner” ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ತಿಳಿಸಲಾಗಿರುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.



