“ಮುಖ್ಯಮಂತ್ರಿಗಳು ವಾಸ್ತವಿಕ ಸತ್ಯವನ್ನು ಬಿಚ್ಚಿಟ್ಟು ರಾಜ್ಯದ ಜನರ ಕ್ಷಮೆ ಕೇಳಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಇವರ ಪಂಚ ಗ್ಯಾರಂಟಿಗಳನ್ನು ನಿರ್ವಹಣೆ ಮಾಡಲು ಹಣಕಾಸಿನ ಸಮಸ್ಯೆ ಕಾಡುತ್ತಿದ್ದು, ಯಾವುದೇ ನೇಮಕಾತಿ ಮಾಡಲು ಕಾಂಗ್ರೆಸ್ಸಿನವರಿಗೆ ಮನಸ್ಸು ಬರುತ್ತಿಲ್ಲ” ಎಂದು ಆರೋಪಿಸಿದರು.
“ಮುಖ್ಯಮಂತ್ರಿಗಳೇ, ನಿಮ್ಮ ಸರಕಾರ ಬಂದು ಎರಡೂಮುಕ್ಕಾಲು ವರ್ಷವಾಗಿದೆ. ಇನ್ನೂ ಬಿಜೆಪಿ ಸರಕಾರವನ್ನು ದೂರುವುದನ್ನು ಮುಂದುವರೆಸಿದ್ದೀರಾ?. ಒಂದು ವರ್ಷದಲ್ಲಿ ನೇಮಕಾತಿ ಮಾಡುವ ಭರವಸೆ ಕೊಟ್ಟಿದ್ದೀರಿ” ಎಂದು ನೆನಪು ಮಾಡಿಕೊಟ್ಟರು.
“ಈ ರೀತಿ ಸುಳ್ಳು ಹೇಳುವುದು, ಆರೋಪ ಮಾಡುವುದನ್ನು ಬಿಟ್ಟು ಕೇವಲ ಪತ್ರಿಕಾ ಹೇಳಿಕೆಗೆ ಸೀಮಿತವಾಗದೇ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು. ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸದೇ ಇದ್ದರೆ ಅತಿ ಶೀಘ್ರದಲ್ಲಿ ಬಿಜೆಪಿ ಹೋರಾಟಕ್ಕೆ ಇಳಿಯಲಿದೆ” ಎಂದು ಎಚ್ಚರಿಸಿದರು.
“ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದವರ ಹುದ್ದೆಗಳಿಗೆ ನೇಮಕಾತಿಗೆ ಸರಕಾರದ ಅನುಮತಿ ಕೇಳಿದ್ದಾರೆ. ಸರಕಾರ ಅನುಮತಿ ನೀಡಿದೆ. ಒಂದು ವರ್ಷ ಎಂಟು ತಿಂಗಳಾದರೂ ಸರಕಾರ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ. ಪ್ರಕ್ರಿಯೆ ಮುಂದುವರೆಸಲು ಸಹಕಾರ ಕೊಡುತ್ತಿಲ್ಲ” ಎಂದು ಟೀಕಿಸಿದರು.
“ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿರುವ ಕಾಂಗ್ರೆಸ್ ಸರಕಾರವು ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸಿಕೊಂಡು, ಹಣಕಾಸು ವ್ಯವಸ್ಥೆ ಸುಸೂತ್ರವಾಗಿದೆ ಎಂದು ತಿಳಿಸುತ್ತಿದೆ. ಬಿಜೆಪಿಯವರಿಗೆ ಏನೂ ಕೆಲಸ ಇಲ್ಲ ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ 59 ಸಾವಿರ ಹುದ್ದೆಗಳು ಬಾಕಿ ಉಳಿದಿವೆ” ಎಂದು ಗಮನ ಸೆಳೆದರು.
“ಆರೋಗ್ಯ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಹುದ್ದೆಗಳು ಭರ್ತಿ ಆಗಬೇಕಿದೆ ಕೈ ಮುಗಿಯುವೆ ಶಿಕ್ಷಕರ ನೇಮಕಾತಿ ಮಾಡಿ ಎಂದು ಗುಲ್ಬರ್ಗದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಒಂದು ವರ್ಷದ ಹಿಂದೆಯೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದರು. ಅವರ ಬಹಿರಂಗ ಬೇಡಿಕೆಯೂ ಈಡೇರಿಲ್ಲ” ಎಂದು ಟೀಕಿಸಿದರು.
“ಮುಖ್ಯಮಂತ್ರಿಗಳು ಸಬೂಬು, ಸುಳ್ಳು ಹೇಳಿ ಜನರನ್ನು ಅಡ್ಡದಾರಿಯಲ್ಲಿ ಒಯ್ಯುವುದನ್ನು ಬದಿಗಿಡಬೇಕು. ಸುಳ್ಳಿನ ಬಂಡಿಯನ್ನು ಶಾಶ್ವತವಾಗಿ ಹೀಗೇ ಓಡಿಸಲು ಸಾಧ್ಯವಿಲ್ಲ” ಎಂದು ವಿಜಯೇಂದ್ರ ಕಿವಿಮಾತು ಹೇಳಿದರು.

