ನವದೆಹಲಿ: ಮದ್ಯದ ಮೇಲಿನ ಕೊರೋನಾ ಶುಲ್ಕವನ್ನು ದೆಹಲಿ ಸರ್ಕಾರ ತೆರವುಗೊಳಿಸಿದ್ದರಿಂದ ದೆಹಲಿಯಲ್ಲಿ ಜೂನ್ 10 ರಿಂದ ಮದ್ಯದ ದರ ಇಳಿಕೆಯಾಗಲಿದೆ.
ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮದ್ಯದ ಮೇಲೆ ಶೇಕಡ 70ರಷ್ಟು ಶುಲ್ಕ ಏರಿಕೆ ಮಾಡಿತ್ತು. ಈಗ ಅದನ್ನು ಹಿಂಪಡೆಯಲು ತೀರ್ಮಾನ ಕೈಗೊಳ್ಳಲಾಗಿದೆ. ಮದ್ಯದ ಮೇಲೆ ಮೌಲ್ಯವರ್ಧಿತ ತೆರಿಗೆಯನ್ನು ಶೇಕಡ 20ರಿಂದ 25 ಕ್ಕೆ ಏರಿಕೆ ಮಾಡಲಾಗುವುದು.
ಆದಾಯ ಸಂಗ್ರಹಕ್ಕಾಗಿ ಕಳೆದ ತಿಂಗಳು ಮದ್ಯದ ಎಂಆರ್ಪಿ ಮೇಲೆ ಶೇಕಡ 70ರಷ್ಟು ಕೊರೋನಾ ಶುಲ್ಕ ವಿಧಿಸಲಾಗಿದ್ದು, ಇದುವರೆಗೆ ಮದ್ಯ ಮಾರಾಟದಿಂದ ಕೇವಲ 235 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿದೆ. ಕೊರೋನಾ ಶುಲ್ಕ ಹೇರಿರುವುದರಿಂದ ಮದ್ಯ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಕೊರೋನಾ ವಿಶೇಷ ಶುಲ್ಕ ರದ್ದುಪಡಿಸಲು ಮುಂದಾಗಿರುವ ಸರ್ಕಾರ ವ್ಯಾಟ್ ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.