HomeLatest Newsಬೇರೊಬ್ಬರ ಹೆಸರಲ್ಲಿ ಬೆಸ್ಕಾಂನಲ್ಲಿ ಮೆಕ್ಯಾನಿಕ್ ಕೆಲಸ ಗಿಟ್ಟಿಸಿಕೊಂಡ ಆಸಾಮಿ: ಹಂತ ಹಂತವಾಗಿ ಪ್ರಮೋಷನ್ ಪಡೆದು 40...

ಬೇರೊಬ್ಬರ ಹೆಸರಲ್ಲಿ ಬೆಸ್ಕಾಂನಲ್ಲಿ ಮೆಕ್ಯಾನಿಕ್ ಕೆಲಸ ಗಿಟ್ಟಿಸಿಕೊಂಡ ಆಸಾಮಿ: ಹಂತ ಹಂತವಾಗಿ ಪ್ರಮೋಷನ್ ಪಡೆದು 40 ವರ್ಷ ಸರ್ಕಾರಿ ಸಂಬಳ ಪಡೆದು ಸಿಕ್ಕಿಬಿದ್ದ ಭೂಪ

ಬೆಂಗಳೂರು: ಇದು ಸಿನಿಮಾ ಕಥೆಯನ್ನೇ ಮೀರಿಸುವ ರಿಯಲ್ ಸ್ಟೋರಿ. ವ್ಯಕ್ತಿಯೊಬ್ಬ ಬೇರೊಬ್ಬರ ಹೆಸರಲ್ಲಿ ಬೆಸ್ಕಾಂ ನಲ್ಲಿ ಕೆಲಸ ಗಿಟ್ಟಿಸಿಕೊಂಡು, ಹಂತ ಹಂತವಾಗಿ ಪ್ರಮೋಷನ್ ಪಡೆದಿದ್ದೂ ಅಲ್ಲದೇ ಬರೋಬ್ಬರಿ 40 ವರ್ಷಗಳ ಕಾಲ ಸರ್ಕಾಅರಿ ಸಂಬಳ ಪಡೆದ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ರಾಜಾಜಿನಗರ ಠಾಣೆ ಪೊಲೀಸರು ಆರೋಪಿ ಬೊಮ್ಮೇಗೌಡ ಎಂಬಾತನನ್ನು ಬಂಧಿಸಿದ್ದಾರೆ. 1982 ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿಯ ಎಂ. ರಾಚಯ್ಯ ಎಂಬ ಯುವಕ ಶಿವಮೊಗ್ಗದ ಕರ್ನಾಟಕ ವಿದ್ಯುತ್ ಮಂಡಳಿಯ ಗ್ಯಾಂಗ್‌ಮನ್ ಹುದ್ದೆಯ ಇಂಟರ್‌ವ್ಯೂಗೆ ಹೋಗಿದ್ದರು. ಆದರೆ ಅಂದು ಸಂದರ್ಶನ ರದ್ದಾಗಿದ್ದರಿಂದ ನಿರಾಸೆಯಿಂದ ವಾಪಸ್ ಆಗುತ್ತಿದ್ದಾಗ ರಾಚಯ್ಯ ತಮ್ಮ ಮಾರ್ಕ್ಸ್‌ಕಾರ್ಡ್, ಪ್ರಮಾಣಪತ್ರವನ್ನು ಬೀಳಿಸಿಕೊಂಡು ಹೋಗಿದ್ದಾರೆ. ಅದೇ ಸಂದರ್ಶನಕ್ಕೆ ಬಂದಿದ್ದ ಹಾಸನ ಮೂಲದ ಬೊಮ್ಮೇಗೌಡನ ಕೈಗೆ ರಾಚಯ್ಯ ಅವರ ಮಾರ್ಕ್ಸ್ ಕಾರ್ಡ್, ದಾಖಲೆ ಪತ್ರಗಳು ಸಿಗುತ್ತವೆ. ತಾನೇ ರಾಚಯ್ಯ ಎಂದು ಸುಳ್ಲು ಹೇಳಿ ಬೊಮ್ಮೇಗೌಡ ನಕಲಿ ಗುರುತಿನ ಪ್ರಮಾಣಪತ್ರದೊಂದಿಗೆ ಬೆಸ್ಕಾಂ ನಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ.

ಹೀಗೆ ಬೊಮ್ಮೇಗೌಡ ‘ರಾಚಯ್ಯ’ನ ಹೆಸರಲ್ಲಿ ಬೆಸ್ಕಾಂನಲ್ಲಿ ಹಂತ ಹಂತವಾಗಿ ಪ್ರಮೋಷನ್ ಪಡೆಯುತ್ತಾ ಸರ್ಕಾರಿ ಸಂಬಳ ಪಡೆಯುತ್ತಾನೆ. 2003ರಲ್ಲಿ ಬೊಮ್ಮೇಗೌಡ, ಕೋರ್ಟ್‌ನಿಂದ ಅಫಿಡವಿಟ್ ತಂದು ಅಧಿಕೃತವಾಗಿ ತನ್ನ ಹೆಸರನ್ನು ರಾಚಯ್ಯ ಎಂದೇ ಬದಲಿಸಿಕೊಳ್ಳುತ್ತಾನೆ. ಇಲಾಖೆಯ ಕಣ್ಣಿಗೆ ಮಣ್ಣೆರಚಿ ಸಂಬಳ ಪಡೆಯುತ್ತಾ ವಂಚಿಸುತ್ತಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2019 ರಲ್ಲಿ ಅಸಲಿ ರಾಚಯ್ಯನಿಗೆ ತನ್ನ ಹೆಸರಲ್ಲಿ ಬೊಮ್ಮೇಗೌಡ ಎಂಬಾತ ಬೆಸ್ಕಾಂನಲ್ಲಿ ಹಿರಿಯ ಶ್ರೇಣಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ವಿಷಯ ಗೊತ್ತಾಗುತ್ತದೆ. ಇದರಿಂದ ಕೋಪಗೊಂಡ ರಾಚಯ್ಯ, ಬೊಮ್ಮೇಗೌಡನನ್ನು ಭೇಟಿಯಾಗಿ ನಿನ್ನನ್ನು ಜೈಲಿಗೆ ಕಳುಹಿಸುವುದಾಗಿ ಹೆದರಿಸಿದಾಗ ಬೊಮ್ಮೇಗೌಡ, ವರ್ಷಕ್ಕೆ 2 ರಿಂದ 3 ಲಕ್ಷ ರೂ. ಕೊಡುವುದಾಗಿ ಹೇಳಿ ರಾಜಿ ಮಾಡಿಕೊಳ್ಳುತ್ತಾನೆ. 2022 ರಲ್ಲಿ ನಿವೃತ್ತಿಯಾದಾಗ ಬಂದ ಸೆಟಲ್‌ಮೆಂಟ್ ಹಣದಲ್ಲಿ 10 ಲಕ್ಷ ರೂಪಾಯಿಯನ್ನು ನಿವೃತ್ತ ಎಂಜಿನಿಯರ್ ಸುಭಾಷ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಅಸಲಿ ರಾಚಯ್ಯನಿಗೆ ನೀಡುತ್ತಾನೆ.

10 ಲಕ್ಷ ರೂಪಾಯಿ ಪಡೆದ ಅಸಲಿ ರಾಚಯ್ಯ, ಬೊಮ್ಮೇಗೌಡನ ಪೆನ್ಷನ್‌ನಲ್ಲೂ ಅರ್ಧ ಪಾಲು ಬೇಕು ಎಂದು ಹಠ ಹಿಡಿಯುತ್ತಾನೆ. ಇದಕ್ಕೆ ಬೊಮ್ಮೇಗೌಡ ಒಪ್ಪದಿದ್ದಾಗ, ರಾಚಯ್ಯ ಬೆಸ್ಕಾಂ ವಿಚಕ್ಷಣಾ ದಳಕ್ಕೆ ದೂರು ನೀಡುತ್ತಾನೆ. ತನಿಖೆಯಲ್ಲಿ ಸಂಪೂರ್ಣ ವಂಚನೆ ಬಯಲಾಗಿದೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಪೊಲೀಸರು, ಬೊಮ್ಮೇಗೌಡ, ರಾಚಯ್ಯ ಹಾಗೂ ಮಧ್ಯಸ್ಥಿಕೆ ವಹಿಸಿದ್ದ ಸುಭಾಷ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular