ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದೀರಿ ಎಂದು ನಿಮ್ಮ ಮೊಬೈಲ್‌ಗೆ ಬರುವ ಎಸ್‌ಎಂಎಸ್ (SMS) ನೋಡಿ ಗಾಬರಿಯಾಗುವ ಮುನ್ನ ಎಚ್ಚರವಹಿಸಿ. ಭಾರತದ ವಾಹನ ಸವಾರರನ್ನೇ ಗುರಿಯಾಗಿಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಬೃಹತ್ ವಂಚನೆಯ ಜಾಲವನ್ನು ಹೆಣೆದಿದ್ದಾರೆ. ಸರ್ಕಾರಿ ಇ-ಚಲನ್ ಪೋರ್ಟಲ್ ಮಾದರಿಯಲ್ಲೇ ಇರುವ ಸುಮಾರು 36ಕ್ಕೂ ಹೆಚ್ಚು ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಸಾರ್ವಜನಿಕರ ಹಣ ದೋಚುತ್ತಿರುವುದು ಬೆಳಕಿಗೆ ಬಂದಿದೆ.
ವಂಚನೆ ನಡೆಯುವುದು ಹೇಗೆ?
ಸೈಬರ್ ಸಂಶೋಧನಾ ಸಂಸ್ಥೆ ‘ಸೈಬಲ್’ (Cyble) ನೀಡಿರುವ ವರದಿಯ ಪ್ರಕಾರ, ವಂಚಕರು ಮೊದಲು ವಾಹನ ಮಾಲೀಕರಿಗೆ ಒಂದು ಸಂದೇಶ ಕಳುಹಿಸುತ್ತಾರೆ. ಅದರಲ್ಲಿ “ನಿಮ್ಮ ಹೆಸರಲ್ಲಿ ದಂಡ ಬಾಕಿಯಿದೆ, ಕೂಡಲೇ ಪಾವತಿಸದಿದ್ದರೆ ಲೈಸೆನ್ಸ್ ರದ್ದಾಗುತ್ತದೆ ಅಥವಾ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಲಾಗಿರುತ್ತದೆ. ಈ ಸಂದೇಶದ ಜೊತೆಗೆ ಒಂದು ಲಿಂಕ್ ಇರುತ್ತದೆ. ಬಳಕೆದಾರರು ಆ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಅದು ಸರ್ಕಾರಿ ವೆಬ್‌ಸೈಟ್‌ನಂತೆಯೇ ಕಾಣುವ ನಕಲಿ ಪೋರ್ಟಲ್‌ಗೆ ಕರೆದೊಯ್ಯುತ್ತದೆ.
ನಕಲಿ ದಂಡದ ಮೊತ್ತ ಮತ್ತು ಪಾವತಿ
ಈ ನಕಲಿ ವೆಬ್‌ಸೈಟ್‌ಗಳಲ್ಲಿ ಬಳಕೆದಾರರಿಗೆ ಅಚ್ಚರಿ ಕಾದಿರುತ್ತದೆ. ಅಲ್ಲಿ ವಾಹನದ ನಕಲಿ ವಿವರಗಳು ಮತ್ತು ಸುಮಾರು 500 ರಿಂದ 600 ರೂಪಾಯಿಗಳ ದಂಡದ ಮೊತ್ತ ಕಾಣಿಸುತ್ತದೆ. ಇದನ್ನು ನಂಬುವ ಜನರು ದಂಡ ಪಾವತಿಸಲು ಮುಂದಾಗುತ್ತಾರೆ. ವಿಶೇಷವೆಂದರೆ, ಈ ಸೈಟ್‌ಗಳಲ್ಲಿ ಯುಪಿಐ (UPI) ಅಥವಾ ನೆಟ್ ಬ್ಯಾಂಕಿಂಗ್ ಆಯ್ಕೆಗಳೇ ಇರುವುದಿಲ್ಲ. ಬದಲಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕವೇ ಹಣ ಪಾವತಿಸುವಂತೆ ಒತ್ತಾಯಿಸಲಾಗುತ್ತದೆ. ಒಮ್ಮೆ ನೀವು ಕಾರ್ಡ್ ನಂಬರ್, ಸಿವಿವಿ (CVV) ಮತ್ತು ಎಕ್ಸ್‌ಪೈರಿ ದಿನಾಂಕವನ್ನು ನಮೂದಿಸಿದರೆ, ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ವಂಚಕರ ಕೈಸೇರುತ್ತದೆ.
ಬಲಿಷ್ಠ ಜಾಲದ ಕಾರ್ಯಾಚರಣೆ
ವರದಿಯ ಪ್ರಕಾರ, ಈ ವಂಚಕರು ಕೇವಲ ಇ-ಚಲನ್ ಮಾತ್ರವಲ್ಲದೆ, ಡಿಟಿಡಿಸಿ (DTDC) ಮತ್ತು ಡೆಲಿವರಿಯಂತಹ ಕೊರಿಯರ್ ಸಂಸ್ಥೆಗಳು ಹಾಗೂ ಎಚ್‌ಎಸ್‌ಬಿಸಿ (HSBC) ಬ್ಯಾಂಕ್ ಹೆಸರಲ್ಲೂ ನಕಲಿ ಪುಟಗಳನ್ನು ಸೃಷ್ಟಿಸಿದ್ದಾರೆ. ಸ್ಥಳೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿ ಸಂದೇಶ ಕಳುಹಿಸುವುದರಿಂದ ಜನರು ಇದನ್ನು ನಿಜವೆಂದೇ ನಂಬುತ್ತಿದ್ದಾರೆ. ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಬಳಸುವ ಭಾಷೆ ಮತ್ತು ಲೋಗೋಗಳನ್ನು ಯಥಾವತ್ ನಕಲು ಮಾಡಿರುವುದು ಈ ವಂಚನೆಯ ಮತ್ತೊಂದು ಭೀಕರ ಮುಖವಾಗಿದೆ.
ಸುರಕ್ಷತೆಗಾಗಿ ಏನು ಮಾಡಬೇಕು?
- ಅಪರಿಚಿತ ಸಂಖ್ಯೆಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
- ಟ್ರಾಫಿಕ್ ದಂಡದ ವಿವರಗಳನ್ನು ಪರೀಕ್ಷಿಸಲು ನೇರವಾಗಿ ಸರ್ಕಾರದ ಅಧಿಕೃತ ವೆಬ್‌ಸೈಟ್ (parivahan.gov.in) ಮಾತ್ರ ಬಳಸಿ.
- ಕೇವಲ ಕಾರ್ಡ್ ವಿವರಗಳನ್ನು ಕೇಳುವ ವೆಬ್‌ಸೈಟ್‌ಗಳ ಬಗ್ಗೆ ಜಾಗರೂಕರಾಗಿರಿ.
- ವಂಚನೆಗೊಳಗಾದ ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ.

