ಚಿಕ್ಕಮಗಳೂರು: ಖೋಟಾ ನೋಟುಗಳನ್ನು ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನೂತನ ಲೇಔಟ್ ಪ್ರದೇಶದಲ್ಲಿ ನಡೆದಿದೆ.
ಬಂಧಿತರನ್ನು ಮಂಗಳೂರಿನ ಮಹಮದ್ ಅಲಿ ಹಾಗೂ ಮೂಡಿಗೆರೆಯ ಮಹೇಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 200 ರೂ ಮುಖಬೆಲೆಯ ಒಟ್ಟು 18 ಸಾವಿರ ರೂ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಮದ್ ಅಲಿ ಮಂಗಳೂರಿನಿಂದ ನಕಲಿ ನೋಟುಗಳನ್ನು ತಂದು ಮೂಡಿಗೆರೆಯಲ್ಲಿ ಮಾರಾಟ ಹಾಗೂ ಚಲಾವಣೆಗೆ ಯತ್ನಿಸುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಸೆರೆ ಹಿಡಿದಿದ್ದಾರೆ.
ಆರೋಪಿಗಳ ಬಳಿ 200 ರೂ ಮುಖಬೆಲೆಯ 45 ಖೋಟಾ ನೋಟುಗಳು ಪತ್ತೆಯಾಗಿವೆ. ಪರಿಶೀಲನೆ ವೇಳೆ ನಕಲಿ ನೋಟುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಬದಲಿಗೆ ’ಬಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಿರುವುದು ಬೆಳಕಿಗೆ ಬಂದಿದೆ. ಈ ದೋಷಪೂರಿತ ಮುದ್ರಣವೇ ನೋಟುಗಳು ನಕಲಿ ಎಂಬುದನ್ನು ಸ್ಪಷ್ಟಪಡಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮೂಡಿಗೆರೆ ಪೊಲೀಸರು ನಕಲಿ ನೋಟುಗಳ ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಜಾಲದ ಹಿಂದೆ ಇನ್ನಷ್ಟು ಜನರು ಇರುವ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

