ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ಕೂಗು ಕೊನೆಗೂ ಕೇಂದ್ರ ಸರ್ಕಾರದ ಕಿವಿಗೆ ಬಿದ್ದಿದೆ. ತಿಂಗಳಾದ ಬಳಿಕ ಎಚ್ಚೆತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಲು ಮುಂದಾಗಿರುವುದು ಆಶಾದಾಯಕ ನಡೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ ಸಿಇಒಗಳ ಉಪಹಾರ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಶಿಕ್ಷಣದ ವಿಚಾರದ ಚರ್ಚೆ ನಡೆದಿದೆ. ಈಗ ಇಡೀ ದೇಶವೇ ಎಚ್ಚೆತ್ತುಕೊಂಡಿದೆ. ನಾವೆಲ್ಲರೂ ಈ ದೇಶದ ವಿದ್ಯಾರ್ಥಿ, ಯುವ ಜನರ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಇನ್ನು ತಮಿಳುನಾಡು ಸಿಎಂ ಪತ್ರ ಬರೆದಿರುವ ಬಗ್ಗೆ, ನಾನು ಈಗ ಅದನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಈ ವಾರ ಸಚಿವ ಸಂಪುಟ ವಿಸ್ತರಣೆ ಮತ್ತು ಇತರೇ ವಿಷಯಗಳ ಕಾರ್ಯನಿರತವಾಗಿದ್ದೇವೆ. ಕೆಲವು ವಿಚಾರಗಳಲ್ಲಿ ನಾವು ಎಲ್ಲರೊಂದಿಗೆ ಮಾತನಾಡಲು, ಎಲ್ಲರೊಂದಿಗೆ ಹಂಚಿಕೊಳ್ಳಲು, ಎಲ್ಲರೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.

