ಬೆಂಗಳೂರು: ಇಂಜಿನಿಯರ್ಗಳ ಅಪಾರ ಕೊಡುಗೆಯನ್ನು ಗೌರವಿಸಿ, ಕರ್ನಾಟಕದ ಅಭಿಯಂತರರು ತಮ್ಮ ಹೆಸರಿನ ಪೂರ್ವದಲ್ಲಿ ಹೆಮ್ಮೆಯಿಂದ ‘Er’ (Engineer- ಅಭಿಯಂತರರು) ಎಂಬ ಶೀರ್ಷಿಕೆಯನ್ನು ಬಳಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್(ಇಂಡಿಯಾ), ಕರ್ನಾಟಕ ರಾಜ್ಯ ಕೇಂದ್ರವು ಬೆಂಗಳೂರಿನಲ್ಲಿ ಆಯೋಜಿಸಿದ್ದ 59ನೇ ಅಭಿಯಂತರರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ಮಾತನಾಡಿದರು.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆಗಳು ಇಂದಿಗೂ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಮಾದರಿ. ಕರ್ನಾಟಕವು ತಂತ್ರಜ್ಞಾನ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ, ನಮ್ಮ ಇಂಜಿನಿಯರ್ಗಳ ಪಾತ್ರ ಮತ್ತಷ್ಟು ಮಹತ್ವದ್ದಾಗಿದೆ ಎಂದರು.
ರಾಜ್ಯದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ನಿರ್ಮಾಣದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿರುವ ನಾಡಿನ ಇಂಜಿನಿಯರ್ಗಳ ಅಪಾರ ಕೊಡುಗೆಯನ್ನು ಗೌರವಿಸಿ, ಕರ್ನಾಟಕದ ಅಭಿಯಂತರರು ತಮ್ಮ ಹೆಸರಿನ ಪೂರ್ವದಲ್ಲಿ ಹೆಮ್ಮೆಯಿಂದ ‘Er’ (Engineer- ಅಭಿಯಂತರರು) ಎಂಬ ಶೀರ್ಷಿಕೆಯನ್ನು ಬಳಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದು ಅವರ ಸೇವೆ ಮತ್ತು ಪರಿಶ್ರಮಕ್ಕೆ ಸರ್ಕಾರ ಸಲ್ಲಿಸುತ್ತಿರುವ ಅರ್ಹ ಗೌರವ. ನವ ಕರ್ನಾಟಕ ನಿರ್ಮಾಣದಲ್ಲಿ ತೊಡಗಿರುವ ಎಲ್ಲಾ ಅಭಿಯಂತರರಿಗೆ ಶುಭಹಾರೈಕೆಗಳು ಎಂದು ಸಿಎಂ ತಿಳಿಸಿದ್ದಾರೆ.
ಪ್ರತಿ ವರ್ಷ ಸೆಪ್ಟೆಂಬರ್, 15 ನ್ನು “ಇಂಜಿನಿಯರ್ಸ್ ದಿನ” ವನ್ನಾಗಿ ಆಚರಿಸುವ ಬಗ್ಗೆ ಮತ್ತು ಇಂಜಿನಿಯರ್ ಗಳ ಹೆಸರುಗಳ ಪೂರ್ವದಲ್ಲಿ Er(Engineer-ಅಭಿಯಂತರರು) ಎಂಬ ಶೀರ್ಷಿಕೆಯನ್ನು (Title) ಬಳಸಲು ಅನುಮತಿಸಲಾಗಿದೆ ಎಂದು ಹೇಳಿದ್ದಾರೆ.
ಆದೇಶ
ಸೆಪ್ಟೆಂಬರ್ 15, 1861 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ, ಭಾರತದ ಶ್ರೇಷ್ಠ ಇಂಜಿನಿಯರ್, ಆಧುನಿಕ ಮೈಸೂರು ರಾಜ್ಯದ ನಿರ್ಮಾತೃ ಮತ್ತು ಮಹಾನ್ ದೇಶಭಕ್ತರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ (Sir M. Visvesvaraya) ರವರು ದೇಶಕ್ಕೆ ನೀಡಿರುವ ಕೊಡುಗೆಗಳು ಅವಿಸ್ಮರಣೀಯ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ 1912 ರಿಂದ 1918 ರವರೆಗೆ ಮೈಸೂರು ರಾಜ್ಯದ 19ನೇ ದಿವಾನರಾಗಿ ಸೇವೆ ಸಲ್ಲಿಸಿದ ಮಾನ್ಯರ ದೂರದೃಷ್ಟಿಯ ಚಿಂತನೆಗಳು “ಕೈಗಾರಿಕೀಕರಣ ಇಲ್ಲವೇ ವಿನಾಶ” (Industrialize or Perish) ಎಂಬ ತತ್ವದ ಮೇಲೆ ಆಧಾರಿತವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿರುವ ಕೊಡುಗೆ, ಮಾಡಿರುವ ಸಾಧನೆ ಅಪಾರವಾದುದಾಗಿದೆ. ಆ ಪೈಕಿ ಇಂಜಿನಿಯರಿಂಗ್ ಮತ್ತು ನೀರಾವರಿ ಕ್ಷೇತ್ರದಲ್ಲಿ ಕೆ.ಆರ್.ಎಸ್ ಅಣೆಕಟ್ಟು (KRS Dam) ನಿರ್ಮಾಣ, ಪ್ರವಾಹದ ನೀರನ್ನು ನಿಯಂತ್ರಿಸಲು ಸ್ವಯಂಚಾಲಿತ ಫ್ಲಡ್ ಗೇಟ್ಗಳ ಅಳವಡಿಕೆ, ಕೈಗಾರಿಕಾ ಕ್ಷೇತ್ರದಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆ, ಮೈಸೂರಿನ ಸುಪ್ರಸಿದ್ಧ ಶ್ರೀಗಂಧದ ತೈಲ ಕಾರ್ಖಾನೆ ಮತ್ತು ಸಾಬೂನು ಕಾರ್ಖಾನೆ ಪ್ರಾರಂಭ, ಶಿಕ್ಷಣ ಮತ್ತು ಹಣಕಾಸು ಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಈಗಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಸ್ಥಾಪನೆ ಮತ್ತು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಳಿಸಲಾಗದಂಥ ತಮ್ಮ ಛಾಪನ್ನು ಮೂಡಿಸಿರುತ್ತಾರೆ.
ಮುಂದುವರೆದು, ಸಮಾಜದ ಪ್ರಗತಿ ಮತ್ತು ಆಧುನಿಕ ಜಗತ್ತಿನ ನಿರ್ಮಾಣದಲ್ಲಿ ಇಂಜಿನಿಯರ್ ಗಳ (ಅಭಿಯಂತರರ) ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂಜಿನಿಯರ್ಗಳು ಕೇವಲ ಯಂತ್ರಗಳನ್ನು ವಿನ್ಯಾಸಗೊಳಿಸುವುದೇ ಅಲ್ಲ, ಬದಲಿಗೆ ಮಾನವನ ಸವಾಲುಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದರೆ ತಪ್ಪಾಗಲಾರದು.
ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ಸ್ ಗಳ ಮಹತ್ವದ ಪಾತ್ರವನ್ನು ಅರಿತು, ಸರ್ ಎಂ. ವಿಶ್ವೇಶ್ವರಯ್ಯ ರವರು ರಾಷ್ಟ್ರಕ್ಕೆ ನೀಡಿರುವ ಗಮನಾರ್ಹ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮ ದಿನವಾದ ಸೆಪ್ಟೆಂಬರ್ 15 ನ್ನು “ಇಂಜಿನಿಯರ್ಸ್ ದಿನ” ವನ್ನಾಗಿ ಆಚರಿಸಿಕೊಂಡು ಬರುತ್ತಿರುವುದನ್ನು ಅಧಿಕೃತವಾಗಿ ಘೋಷಿಸಲು ಹಾಗೂ ಅವರ ಕೊಡುಗೆಯನ್ನು ವಿಶಿಷ್ಟ ಚಿಹ್ನೆಯೊಂದಿಗೆ ಗೌರವಿಸಲು ನಿರ್ಧರಿಸಿದ್ದು, ಕರ್ನಾಟಕದ ಇಂಜಿನಿಯರ್ ಗಳು ತಮ್ಮ ಹೆಸರಿನ ಮೊದಲು “Er” ಎಂಬ ಪೂರ್ವಪ್ರತ್ಯಯವನ್ನು ಹೆಮ್ಮೆಯಿಂದ ಬಳಸಬಹುದಾಗಿದ್ದು, ಇದು ಕೇವಲ ಎರಡು ಅಕ್ಷರಗಳಾಗಿರದೇ, ಅವರುಗಳ ಜೀವಿತಾವಧಿಯ ಸೇವೆಯನ್ನು ಪ್ರತಿನಿಧಿಸುವುದರಿಂದ, ಇಂಜಿನಿಯರ್ಗಳ ಹೆಸರುಗಳ ಪೂರ್ವದಲ್ಲಿ Er(Engineer-ಅಭಿಯಂತರರು) ಶೀರ್ಷಿಕೆಯನ್ನು (Title) ಬಳಸಲು ಸರ್ಕಾರವು ತೀರ್ಮಾನಿಸಿ, ಅದರಂತೆ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 144 ಎಸ್ಸಿಇ 2026, ದಿನಾಂಕ: 15.09.2026
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದೇಶದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಇಂಜಿನಿಯರ್ಸ್ ಗಳ ಅತ್ಯಮೂಲ್ಯವಾದ ಕೊಡುಗೆಯನ್ನು ಸ್ಮರಿಸುತ್ತಾ, ಗೌರವ ಸಮರ್ಪಣೆ ಮಾಡುವ ಸಲುವಾಗಿ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮ ದಿನವಾದ “ಸೆಪ್ಟೆಂಬರ್ 15” ನ್ನು “ಇಂಜಿನಿಯರ್ಸ್ ದಿನ” ವನ್ನಾಗಿ ಆಚರಿಸಲು ಮತ್ತು ಇಂಜಿನಿಯರ್ ಗಳ ಹೆಸರಿನ ಪೂರ್ವದಲ್ಲಿ Er(Engineer-ಅಭಿಯಂತರರು) ಎಂಬ ಶೀರ್ಷಿಕೆಯನ್ನು (Title) ಬಳಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ

