ಪತಿ ಯೋ ಯೋ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಪತ್ನಿ ಶಾಲಿನಿ ತಲ್ವಾರ್ ಪರಿಹಾರದ ರೂಪದಲ್ಲಿ 10 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಪ್ರಕರಣ ಸಂಬಂಧ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತಾನಿಯಾ ಸಿಂಗ್ ಯೋ ಯೋ ಹನಿ ಸಿಂಗ್ಗೆ ನೋಟಿಸ್ ಕಳುಹಿಸಿದ್ದು ನೋಯ್ಡಾದಲ್ಲಿರುವ ಜಂಟಿ ಒಡೆತನದ ಆಸ್ತಿಯಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಕ್ಕನ್ನು ಸೃಷ್ಟಿಸದಂತೆ ಹಾಗೂ ಪತ್ನಿಯ ಆಭರಣ ಸೇರಿದಂತೆ ಇತರೆ ಯಾವುದೇ ವಸ್ತುಗಳಿಗೆ ಹಾನಿ ಮಾಡದಂತೆ ಸೂಚಿಸಿದ್ದಾರೆ ಎಂದು ಶಾಲಿನಿ ಪರ ವಕೀಲರು ಹೇಳಿದ್ದಾರೆ.
ಹನಿ ಸಿಂಗ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿರುವ ಶಾಲಿನಿ ತಲ್ವಾರ್, ತಮ್ಮ ಪತಿಯಿಂದಾಗಿ ತಾವು ಕಳೆದ 10 ವರ್ಷಗಳಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ದೌರ್ಜನ್ಯಕ್ಕೆ ಒಳಗಾಗಿರೋದಾಗಿ ಹೇಳಿದ್ದಾರೆ.
ಯೋ ಯೋ ಹನಿ ಸಿಂಗ್ ಸಾಕಷ್ಟು ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ. ಮದುವೆ ಫೋಟೋಗಳನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡೆ ಎಂಬ ಕಾರಣಕ್ಕೆ ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದ ಎಂದು ತಲ್ವಾರ್ ಆರೋಪಿಸಿದ್ದಾರೆ.
ಇದು ಮಾತ್ರವಲ್ಲದೇ ಯೋ ಯೋ ಹನಿ ಸಿಂಗ್ ತಂದೆ ಕೂಡ ನಾನು ರೂಮಿನಲ್ಲಿ ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಎಂಟ್ರಿ ಕೊಟ್ಟಿದ್ದಾರೆ ಹಾಗೂ ನನ್ನ ವೈಯಕ್ತಿಕ ಅಂಗಾಂಗಗಳನ್ನು ಬಲವಂತದಿಂದ ಸ್ಪರ್ಶಿಸಿದ್ದಾರೆ ಎಂದು ದೂರಿದ್ದಾರೆ.