ಹಾಸನ: ಹಾಸನ ಜಿಲ್ಲೆ ದುದ್ದ ಸಮೀಪದ ತಿಮ್ಲಾಪುರ ಬಳಿ ನಟ ರಾಕಿಂಗ್ ಸ್ಟಾರ್ ಯಶ್ ಅವರ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಅವರ ತಂದೆ, ತಾಯಿ ಹಾಗೂ ಗ್ರಾಮಸ್ಥರ ನಡುವೆ ಜಗಳವಾಗಿದೆ.
ಜಮೀನಿಗೆ ಕೆಲವರು ಅಕ್ರಮವಾಗಿ ಪ್ರವೇಶಿಸಿದ್ದಾರೆನ್ನಲಾಗಿದ್ದು, ಇದನ್ನು ಪ್ರಶ್ನಿಸಿದ ಕೆಲಸ ಮಾಡುವ ಹುಡಗರ ಮೇಲೆ ಹಲ್ಲೆ ಮಾಡಿದ್ದಾರೆ. ಇದಕ್ಕೆ ಆಕ್ಷೇಪಿಸಿದ್ದಕ್ಕೆ ಯಶ್ ಅವರ ತಂದೆ, ತಾಯಿ ಜೊತೆಗೆ ಜಗಳವಾಡಿದ್ದಾರೆ ಎನ್ನಲಾಗಿದೆ.
ಜಗಳದ ವಿಚಾರ ಮಾಧ್ಯಮಗಳಲ್ಲಿಯೂ ವರದಿಯಾಗಿದ್ದು, ಮಾಹಿತಿ ತಿಳಿದ ಯಶ್ ಅವರು ದುದ್ದ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರೊಂದಿಗೆ ಮಾತನಾಡಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.
ತಮ್ಮ ತಂದೆ-ತಾಯಿ ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದ ದುದ್ದ ಪೊಲೀಸ್ ಠಾಣೆ ಬಳಿ ನಟ ಯಶ್ ಮಾತನಾಡಿ, ಸಮಸ್ಯೆ ಇದ್ದರೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಿ. ನಮ್ಮ ತಂದೆ, ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಎಲ್ಲಿಂದಲೋ ಬಂದವರು ಅಂತಾರೆ. ನಾನು ಇಲ್ಲೇ ಹುಟ್ಟಿದ್ದು. ನಾನು ಹಾಸನದಲ್ಲಿಯೂ ಫಾರ್ಮ್ ಹೌಸ್ ಮಾಡ್ತೇನೆ. ಬೆಳಗಾವಿ, ಮಂಗಳೂರಿನಲ್ಲಿಯೂ ಮಾಡುತ್ತೇನೆ. ನಾನು ಕರ್ನಾಟಕದವನು. ನಾವು ಸೆಲೆಬ್ರಿಟಿ ಆಗುವುದೇ ತಪ್ಪಾ? ಅನ್ನುವ ಹಾಗಾಗಿದೆ. ತಂದೆ-ತಾಯಿಗೆ ಸಮಸ್ಯೆಯಾದಾಗ ಇಮೇಜ್ ನೋಡಲಾಗಲ್ಲ ಎಂದು ಹೇಳಿದ್ದಾರೆ.
ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ಬಳಿಕ ತಮ್ಮ ಬೆಂಬಲಿಗರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕಷ್ಟಪಟ್ಟು ದುಡಿದು ಜಮೀನು ತೆಗೆದುಕೊಂಡಿದ್ದೇವೆ. ಅದಕ್ಕೆ ಕಾಂಪೌಂಡ್ ಹಾಕುತ್ತಿದ್ದೇವೆ. ನಮ್ಮ ಕೆಲಸದ ಹುಡುಗರ ಬಗ್ಗೆ ಕೆಲವರು ಜಮೀನಿಗೆ ಬಂದು ಮಾತನಾಡಿದ್ದಾರೆ. ಅವರ ಮೇಲೆ ಕೈ ಮಾಡಿದ್ದಾರೆ. ನಮ್ಮ ಮನೆಯ ಹುಡುಗರ ಮೇಲೆ ಕೈ ಮಾಡಿದ್ರೆ ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದ್ದಾರೆ.
ದೇವಸ್ಥಾನಕ್ಕೆ ಹೋಗಲು ಹಿಂದೆಯೇ ರಸ್ತೆ ಮಾಡಿದ್ದಾರೆ. ನಮ್ಮ ಜಮೀನಿಗೆ ಹೋಗಲು ಅಲ್ಲ. ನಮ್ಮ ಜಮೀನು ಬಳಿ ಬಂದ ಕೆಲವರು ವಿನಾಕಾರಣ ಗಲಾಟೆ ಮಾಡಿ ನಮ್ಮ ತಂದೆ-ತಾಯಿಯೊಂದಿಗೆ ಜಗಳವಾಡಿದ್ದಾರೆ. ಅವರೂ ಜಗಳದ ವೇಳೆ ಜೋರಾಗಿ ಮಾತಾಡಿದ್ದಾರೆ. ಆದರೆ, ಇದಕ್ಕೆಲ್ಲ ಇಮೇಜ್ ನೋಡಿಕೊಂಡು ಕೂರಲು ಆಗುವುದಿಲ್ಲ. ಎಲ್ಲಿಂದಲೋ ಬಂದವರು ಎಂದು ಹೇಳಿದ್ದಾರೆ. ನಾನು ಇಲ್ಲೇ ಹುಟ್ಟಿರುವ ಮಗ. ನಾವು ಅಪ್ಪ-ಅಮ್ಮನಿಗೆ ಹುಟ್ಟಿರುವ ಮಕ್ಕಳೇ. ಗ್ರಾಮದ ಜನರಿಗೆ ಅನುಕೂಲ ಆಗುತ್ತೆ, ಸರ್ಕಾರಿ ಶಾಲೆ ಕಟ್ಟಲು ಜಾಗ ಬೇಕಾಗುತ್ತೆ ಎನ್ನುವುದಾದರೆ ಅವರ ಅನುಕೂಲಕ್ಕೆ ನಾವೇ 10 ಎಕರೆ ಜಮೀನು ಬಿಟ್ಟುಕೊಡುತ್ತೇವೆ ಎಂದು ತಿಳಿಸಿದ್ದಾರೆ.
ನಾನು ಹಣ ಮಾಡುವ ಉದ್ದೇಶದಿಂದ ಜಮೀನು ಮಾಡುವುದಾಗಿದ್ದರೆ, ಹಾಸನದಲ್ಲಿ ಜಮೀನು ಮಾಡುತ್ತಿರಲಿಲ್ಲ. ಬೆಂಗಳೂರಿನಲ್ಲಿ ಖರೀದಿಸಿ ಮಾರಾಟ ಮಾಡುತ್ತಿದ್ದೆ. ಮಾದರಿ ಕೃಷಿ ಮಾಡುವ ಉದ್ದೇಶದಿಂದ ಜಮೀನು ಮಾಡಿದ್ದೇವೆ. ಕೆಲವರು ಹೇಳಿದ್ದೆಲ್ಲ ಸರಿಯಲ್ಲ ಎಂದು ಹೇಳಿದ್ದಾರೆ.