ವಿದೇಶಗಳಲ್ಲಿ, ವಿದೇಶಗಳಿಂದ ಬಂದವರಿಗೆ ಮೊದಮೊದಲು ಕಾಣಿಸಿಕೊಂಡ ಕೊರೊನಾ ಈಗ ನಮ್ಮ ಅಕ್ಕಪಕ್ಕದ ಬೀದಿವರೆಗೂ ಬಂದು ಬಿಟ್ಟಿದೆ.
ಕೋವಿಡ್ ಎಂದರೆ ಮಹಾ ಮಾರಿ ಎಂದು ತಿಳಿದಿದ್ದ ಜನರಿಗೆ ಈಗ ಅದರ ಅಸಲಿಯತ್ತಿನ ಅರಿವಾಗಿದೆ. ಅದು ಸಾಂಕ್ರಾಮಿಕ, ರೋಗ ಮಾತ್ರ. ನಿರೋಧಕ ಶಕ್ತಿ ಇದ್ದ ಸಾಮಾನ್ಯ ಜನರಿಗೆ ಮಾರಣಾಂತಿಕವಲ್ಲ ಎಂಬುದು ಅರಿವಾಗಿದೆ.
ಕೊರೊನಾ ಸೋಂಕಿಗೆ ತುತ್ತಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ತೆರಳಿದ ಬಹುತೇಕರು ಯಾವುದೇ ರೋಗ ಲಕ್ಷಣವೂ ಇಲ್ಲದೇ ಆರಾಮವಾಗಿರುತ್ತಿದ್ದಾರೆ. ಆದರೆ, 14 ದಿನ ಅಲ್ಲಿ ಮನೆಯವರ ಸಂಪರ್ಕವಿಲ್ಲದೇ ಕಳೆಯುವುದು ಸುಲಭವಲ್ಲ. ಇದರಿಂದ ತಮ್ಮ ಮಾನಸಿಕ ಬೇಸರ ಹೋಗಲಾಡಿಸಲು ಅವರೆಲ್ಲ ಸೇರಿ ಹಾಡು, ನೃತ್ಯಗಳಲ್ಲಿ ತೊಡಗಿದ ಸಾಕಷ್ಟು ವಿಡಿಯೋಗಳು ಇದುವರೆಗೆ ಬಂದಿವೆ. ಕೆಲವೆಡೆ ವೈದ್ಯರೂ ರೋಗಿಗಳ ಜತೆ ಸೇರಿ ಹೆಜ್ಜೆ ಹಾಕುವುದು ಕಂಡುಬಂದಿದೆ.
ಈಗ ಅಸ್ಸಾಂನ ಕೋವಿಡ್ ಸೆಂಟರ್ ಒಂದರಲ್ಲಿ ರೋಗಿಗಳು ತಮಿಳು ಹಾಡಿಗೆ ಹೆಜ್ಜೆ ಹಾಕುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಫೇಸ್ ಮಾಸ್ಕ್ ಧರಿಸಿದ ಐದಾರು ಜನರು ಚಪ್ಪಾಳೆ ತಟ್ಟಿ ನೃತ್ಯ ಮಾಡಿದರೆ, ಒಬ್ಬ ವ್ಯಕ್ತಿ ಕೊಳಲು ನುಡಿಸಿದ್ದಾನೆ. ಎಎನ್‌ಐ, ಅಸ್ಸಾಂ ದಿಬ್ರುಘರ್ ಕೋವಿಡ್ ಕೇರ್ ಸೆಂಟರ್ ನ ನೃತ್ಯದ ವಿಡಿಯೋವನ್ನು ಟ್ವೀಟ್ ಮಾಡಿದೆ.