ನವದೆಹಲಿ: ಅಕ್ಟೋಬರ್ 1 ರಿಂದ ಅನ್ಲಾಕ್ 5.0 ಆರಂಭವಾಗಲಿದ್ದು ಚಿತ್ರಮಂದಿರಗಳ ಪುನಾರಂಭಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.
ಹಂತಹಂತವಾಗಿ ಲಾಕ್ಡೌನ್ ತೆರವುಗೊಳಿಸುತ್ತಿರುವ ಕೇಂದ್ರ ಸರ್ಕಾರ ಅನ್ಲಾಕ್ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಅಕ್ಟೋಬರ್ 1 ರಿಂದ ಸಿನಿಮಾ ಮಂದಿರ ಪುನಾರಂಭಕ್ಕೆ ಅವಕಾಶ ನೀಡಬಹುದಾಗಿದೆ ಎಂದು ಹೇಳಲಾಗಿದೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ ಅವರು ಸಿನಿಮಾ ಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುವಾಗುವಂತೆ ವ್ಯವಸ್ಥೆ ರೂಪಿಸಲು ಸಲಹೆ ನೀಡಿದ್ದರು. ಅಂತೆಯೇ ಸೆಪ್ಟಂಬರ್ 30ಕ್ಕೆ ಅನ್ಲಾಕ್ 4.0 ಮುಕ್ತಾಯವಾಗಲಿದ್ದು, ಅಕ್ಟೋಬರ್ 1 ರಿಂದ ಅನ್ವಯವಾಗುವಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಈ ವೇಳೆ ಸಿನಿಮಾ ಮಂದಿರಗಳ ಆರಂಭಕ್ಕೆ ಅವಕಾಶ ನೀಡಲು ಸಾಧ್ಯತೆ ಇದೆ ಎಂದು ಹೇಳಲಾಗಿದೆ.