ಕೊರೋನಾ ವೈರಸ್ ಲಾಕ್‌ಡೌನ್ ಕಾರಣದಿಂದ ಕಳೆದ ಐದು ತಿಂಗಳುಗಳಿಂದ ಯಾವುದೇ ಶೂಟಿಂಗ್ ಚಟುವಟಿಕೆ ಇಲ್ಲದೇ ಸ್ತಬ್ಧವಾಗಿದ್ದ ತಮಿಳು ಚಿತ್ರರಂಗ ಮತ್ತೆ ತನ್ನ ಕೆಲಸ ಆರಂಭಿಸಲಿದೆ.
ಲಾಕ್‌ಡೌನ್ ಕಾರಣದಿಂದ ಚಿತ್ರೋದ್ಯಮವನ್ನೇ ನಂಬಿಕೊಂಡಿರುವ ಕಲಾವಿದರು ಹಾಗು ಸಹಾಯಕ ಸಿಬ್ಬಂದಿಯ ಸಂಪಾದನೆಗೆ ಕಷ್ಟವಾಗುತ್ತಿದ್ದು, ಆದಷ್ಟು ಬೇಗ ಶೂಟಿಂಗ್ ಮತ್ತೆ ಆರಂಭಿಸಲು ಅನುಮತಿ ನೀಡಬೇಕೆಂದು ಕೋರಿ ಕಾಲಿವುಡ್‌ನ ನಿರ್ದೇಶಕರು ಹಾಗೂ ನಿರ್ಮಾಪಕರು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿಯವರನ್ನು ಭೇಟಿಯಾಗಿದ್ದರು.
ಕೋವಿಡ್-19 ಸುರಕ್ಷತಾ ಮಾನದಂಡಗಳನ್ನು ಪಾಲನೆ ಮಾಡಿಕೊಂಡು, ಸೆಟ್‌ನಲ್ಲಿ 75ಕ್ಕಿಂತ ಹೆಚ್ಚು ಮಂದಿ ಇರಬಾರದೆಂಬ ಷರತ್ತುಗಳನ್ನು ಮುಂದಿಟ್ಟು ಶೂಟಿಂಗ್ ಮಾಡಲು ತಮಿಳುನಾಡು ಸರ್ಕಾರ ಅನುಮತಿ ಕೊಟ್ಟಿದೆ.
ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಇನ್ನೂ ಅವಕಾಶ ಕೊಟ್ಟಿರದ ಕಾರಣ ಇವುಗಳ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದು, ಲಾಕ್‌ಡೌನ್ ಅವಧಿಯಲ್ಲಿ ಆದಾಯವಿಲ್ಲದೇ ಚಿತ್ರ ಪ್ರದರ್ಶನವನ್ನೇ ನಂಬಿಕೊಂಡು ಬದುಕುತ್ತಿರುವ ಮಂದಿಗೆ ಬಹಳ ಕಷ್ಟವಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.