ನವದೆಹಲಿ: ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಾಫ ರಾಜ್ ಅವರ ಮದುವೆ ಅಸಿಂಧು ಎಂದು ಮುಸ್ತಾಪ ಮೊದಲನೇ ಪತ್ನಿ ಆಯೇಷಾ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಪ್ರಿಯಾಮಣಿಯನ್ನು ಮುಸ್ತಾಫ ಮದುವೆಯಾಗಿದ್ದ ಸಂದರ್ಭದಲ್ಲಿ ನನಗೆ ಡೈವೋರ್ಸ್ ಕೊಟ್ಟಿರಲಿಲ್ಲ. ಅವರ ಮದುವೆಯ ಸಂದರ್ಭದಲ್ಲಿ ನಾವು ವಿಚ್ಛೇದನಕ್ಕೆ ಅರ್ಜಿ ಕೂಡ ಸಲ್ಲಿಸಿರಲಿಲ್ಲ. ಪ್ರಿಯಾಮಣಿ ಅವರನ್ನು ಮದುವೆಯಾಗುವ ವೇಳೆ ಮುಸ್ತಾಫ ನಾನಿನ್ನು ಬ್ರಹ್ಮಚಾರಿ ಎಂದು ಕೋರ್ಟ್ ಗೆ ಹೇಳಿದ್ದರು. ಆದರೆ, ನಾವಿನ್ನೂ ಕಾನೂನಾತ್ಮಕವಾಗಿ ಬೇರೆಯಾಗಿಲ್ಲ ಎಂದು ಆಯೇಷಾ ದೂರಿದ್ದಾರೆ.
ಮುಸ್ತಾಫ ಮತ್ತು ಪ್ರಿಯಾಮಣಿ ಅವರ ಮದುವೆ ಅಸಿಂಧು ಎಂದು ಆಯೇಷಾ ಮಾಧ್ಯಮಗಳಿಗೆ ಹೇಳಿದ್ದು, ಇಬ್ಬರ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಆದರೆ, ಆಯೇಷಾ ಆರೋಪವನ್ನು ತಳ್ಳಿಹಾಕಿರುವ ಮುಸ್ತಾಫ 2017 ರಲ್ಲಿಯೇ ಡೈವೋರ್ಸ್ ನೀಡಿದ್ದು, ಈಗಲೂ ಇಬ್ಬರು ಮಕ್ಕಳ ಪೋಷಣೆಗೆ ಹಣ ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಹಣ ಪಡೆದುಕೊಳ್ಳಲು ಆಯೇಷಾ ಇಂತಹ ಆರೋಪ ಮಾಡಿರುವುದಾಗಿ ಮುಸ್ತಾಫ ಆರೋಪಿಸಿದ್ದಾರೆ. 2014ರಲ್ಲಿ ಮುಸ್ತಾಫ ಮತ್ತು ಆಯೇಷಾ ಬೇರೆಯಾಗಿದ್ದು, 2017 ರಲ್ಲಿ ಪ್ರಿಯಾಮಣಿಯೊಂದಿಗೆ ಮುಸ್ತಾಫ ಮದುವೆಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ಪ್ರಿಯಾಮಣಿ, ನಮ್ಮ ದಾಂಪತ್ಯ ಭದ್ರವಾಗಿದ್ದು, ಮುಸ್ತಾಫ ಮತ್ತು ನನ್ನ ಸಂಬಂಧ ಅನ್ಯೋನ್ಯವಾಗಿದೆ ಎಂದು ಹೇಳಿದ್ದಾರೆ.