ತೆಲುಗು ಚಿತ್ರನಟ ನಂದಮೂರಿ ತಾರಕರತ್ನ ಅವರಿಗೆ ಶುಕ್ರವಾರ ತೀವ್ರ ಹೃದಯಾಘಾತವಾಗಿದ್ದು, ಅವರನ್ನು ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಸ್ಥಳಾಂತರ ಮಾಡಲಾಗಿದೆ.
ತಾರಕರತ್ನ ಅವರು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಯುವ ಗಲಮ್ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಪ್ಪಂಗೆ ತೆರಳಿದ್ದರು.
ಲೋಕೇಶ್ ಮಸೀದಿಯಿಂದ ಪ್ರಾರ್ಥನೆ ಸಲ್ಲಿಸಿ ಹೊರಬಂದಾಗ ಅಲ್ಲಿ ನೆರೆದಿದ್ದ ಟಿಡಿಪಿ ಕಾರ್ಯಕರ್ತರು ಏಕಾಏಕಿ ಲೋಕೇಶ್ ಕಡೆಗೆ ನುಗ್ಗಿದ್ದು, ಅಲ್ಲಿಯೇ ನಿಂತಿದ್ದ ತಾರಕರತ್ನ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಕುಪ್ಪಂನ ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಪಿಇಎಸ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು.
ತಾರಕರತ್ನ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಪಿಇಎಸ್ ವೈದ್ಯಕೀಯ ಕಾಲೇಜು ವೈದ್ಯರ ಸಲಹೆಯಂತೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯರೊಂದಿಗೆ ಸಂಪರ್ಕದಲ್ಲಿರುವ ನಟ ಮತ್ತು ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ ಹೇಳಿದ್ದಾರೆ.
ಈ ಮಧ್ಯೆ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ವೈದ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಾರಕರತ್ನ ಅವರ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ. ಮೊದಲ ದಿನ ಪಾದಯಾತ್ರೆ ಮುಗಿಸಿದ ಲೋಕೇಶ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ತಾರಕರತ್ನ ಅವರ ಸ್ಥಿತಿಗತಿ ವಿಚಾರಿಸಿದರು. ನಂತರ ರಾತ್ರಿ ತಾರಕರತ್ನ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಯಿತು. ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.