ಬೆಂಗಳೂರು: ಹೃದಯಾಘಾತಕ್ಕೊಳಗಾಗಿದ್ದ ತೆಲುಗು ನಟ ನಂದಮೂರಿ ತಾರಕರತ್ನ(39) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
1983ರ ಫೆಬ್ರವರಿ 22ರಂದು ಮೋಹನ ಕೃಷ್ಣ ಮತ್ತು ಶಾಂತಿ ಮೋಹನ್ ದಂಪತಿಗೆ ಜನಿಸಿದ ನಂದಮೂರಿ ತಾರಕರತ್ನ ನಟ ಜೂನಿಯರ್ ಎನ್ಟಿಆರ್ ಅವರ ಚಿಕ್ಕಪ್ಪನ ಮಗನಾಗಿದ್ದಾರೆ. 20ಕ್ಕೂ ಹೆಚ್ಚು ಚಿತ್ರಗಳಲ್ಲಿ ತಾರಕರತ್ನ ನಟಿಸಿದ್ದರು.
‘ಅಮರಾವತಿ’, ‘ಭದ್ರಾದಿ ರಾಮುಡು’, ‘ಯುವರತ್ನ’, ‘ತಾರಕ್’ ಮೊದಲಾದ ಚಿತ್ರಗಳಲ್ಲಿ ಹೀರೋ, ವಿಲನ್, ಪೋಷಕ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ‘ಅಮರಾವತಿ’ ಚಿತ್ರದ ನಟನೆಗೆ ಅತ್ಯುತ್ತಮ ವಿಲನ್ ಅವಾರ್ಡ್ ಪಡೆದುಕೊಂಡಿದ್ದರು.
ನಂದಮೂರಿ ತಾರಕರತ್ನ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 23 ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಜನವರಿ 27ರಂದು ಟಿಡಿಪಿ ಪಾದಯಾತ್ರೆಯಲ್ಲಿ ಕುಸಿದು ಬಿದ್ದಿದ್ದರು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಕುಪ್ಪಂ ಸಮೀಪ ಪಾದಯಾತ್ರೆಯಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಸ್ಟಂಟ್ ಅಳವಡಿಸಿ ವೈದ್ಯರ ಸೂಚನೆಯಂತೆ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು.
ಅವರ ಪಾರ್ಥಿವ ಶರೀರವನ್ನು ಹೈದರಾಬಾದ್ ಗೆ ಶಿಫ್ಟ್ ಮಾಡಲಾಗಿದೆ. ಅವರ ನಿಧನಕ್ಕೆ ಆಂಧ್ರ ಸಿಎಂ ಜಗನ್, ತೆಲಂಗಾಣ ಸಿಎಂ ಚಂದ್ರಶೇಖರರಾವ್ ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಂದಮೂರಿ ಕುಟುಂಬದಲ್ಲಿ ಶೋಕಸಾಗರ ಮಡುಗಟ್ಟಿದೆ.
ಸಹೋದರನ ಪುತ್ರ ತಾರಕರತ್ನ ನಿಧನಕ್ಕೆ ನಟ ಬಾಲಕೃಷ್ಣ ಕಂಬನಿ ಮಿಡಿದಿದ್ದಾರೆ. ಟಾಲಿವುಡ್ ನಟರಾದ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಪವನ್ ಕಲ್ಯಾಣ್, ರವಿತೇಜ, ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್, ಜೂನಿಯರ್ ಎನ್ಟಿಆರ್, ಕಲ್ಯಾಣ್ ರಾಮ್, ಅಲ್ಲು ಅರ್ಜುನ್, ನಾಗ ಚೈತನ್ಯ, ನಾನಿ ಸೇರಿದಂತೆ ಹಲವು ನಟರು ಸಂತಾಪ ಸೂಚಿಸಿದ್ದಾರೆ.