ಚೆನ್ನೈ: ಮುಂಬರುವ ವಿಧಾನಸಭೆ ಚುನಾವಣೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ.
ಡಿಎಂಕೆ, ಎಐಎಡಿಎಂಕೆ, ಬಿಜೆಪಿ, ಕಾಂಗ್ರೆಸ್ ಮೊದಲಾದ ಸ್ಥಾಪಿತ ಪಕ್ಷಗಳ ಜೊತೆಗೆ ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ರಾಜಕೀಯ ಪ್ರವೇಶ ಚುನಾವಣೆ ರಾಜಕೀಯದ ದಿಕ್ಕನ್ನು ಬದಲಿಸಬಹುದು ಎಂದು ಹೇಳಲಾಗಿದೆ.
ದೀರ್ಘಕಾಲದ ಗೆಳೆಯರಾಗಿರುವ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಮಕ್ಕಳ್ ನೀದಿ ಮಯ್ಯುಂ ಪಕ್ಷದ ಪರವಾಗಿ ಈಗಾಗಲೇ ಪ್ರಚಾರ ಕಾರ್ಯವನ್ನು ಕಮಲ್ ಹಾಸನ್ ಆರಂಭಿಸಿದ್ದಾರೆ. ರಜನಿಕಾಂತ್ ಹೊಸ ವರ್ಷದಿಂದ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ.
ತಮಿಳುನಾಡಿನಲ್ಲಿ 1967 ರಿಂದ ಎಐಎಡಿಎಂಕೆ ಮತ್ತು ಡಿಎಂಕೆ ಅಧಿಕಾರಕ್ಕೆ ಬರುತ್ತಿದ್ದು, ಬೇರೆ ಪಕ್ಷಗಳಿಗೆ ಇಲ್ಲಿ ಅವಕಾಶವೇ ಇಲ್ಲ. ಆದರೆ, ಈ ಬಾರಿ ಪರಿಸ್ಥಿತಿ ಮೊದಲಿನಂತಿಲ್ಲ. ಕರುಣಾನಿಧಿ ಮತ್ತು ಜಯಲಲಿತಾ ಅವರಿಲ್ಲದ ಮೊದಲ ವಿಧಾನಸಭೆ ಚುನಾವಣೆ 2021 ರಲ್ಲಿ ನಡೆಯಲಿದ್ದು, ರಜನಿಕಾಂತ್ ಮತ್ತು ಕಮಲಹಾಸನ್ ಮೈತ್ರಿ ಮಾಡಿಕೊಂಡರೆ ತಮಿಳುನಾಡು ರಾಜಕೀಯದ ದಿಕ್ಕು ಬದಲಾಗಬಹುದು ಎಂದು ಹೇಳಲಾಗಿದೆ.
ದೀರ್ಘಕಾಲದ ಗೆಳೆಯರಾಗಿರುವ ರಜನಿಕಾಂತ್ ಅವರೊಂದಿಗೆ ತಮಿಳುನಾಡಿನ ಜನರ ಒಳಿತಿಗಾಗಿ ಕೈಜೋಡಿಸಲು ಸಿದ್ಧವಿದ್ದೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ತಮ್ಮ ಸಿದ್ಧಾಂತಗಳು ಹೊಂದಾಣಿಕೆಯಲ್ಲಿ ಮಾತ್ರ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಕಮಲ್ ಹಾಸನ್ ಹೇಳಿದ್ದು, ಇವರ ಪಕ್ಷಗಳ ಮೈತ್ರಿ ಕುರಿತಾಗಿ ಭಾರಿ ಚರ್ಚೆಗೆ ನಡೆದಿದೆ. ಸೂಪರ್ ಸ್ಟಾರ್ ಗಳ ಮೈತ್ರಿ ವಿಚಾರ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.