ತಮಿಳುನಾಡಿನ ತೂತ್ತುಕುಡಿಯಲ್ಲಿ ನಡೆದಿದೆ ಎನ್ನಲಾಗಿರುವ ಲಾಕ್ ಅಪ್ ಡೆತ್ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿರುವ ಪೋಸ್ಟ್ ತೆಗೆದುಹಾಕುವಂತೆ ಗಾಯಕಿ, ಆರ್ ಜೆ ಸುಚಿತ್ರಾಗೆ ಪೊಲೀಸರು ಸೂಚಿಸಿದ್ದಾರೆ.
ತೂತ್ತುಕುಡಿಯ ಸತಾಂಕುಳಂ ನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿಯೂ ಮೊಬೈಲ್ ಅಂಗಡಿಯನ್ನು ತೆರೆದುಕೊಂಡಿದ್ದರು ಎಂಬ ಕಾರಣಕ್ಕೆ ಅಂಗಡಿ ಮಾಲೀಕ ಜಯರಾಜ್ ಹಾಗೂ ಪೊಲೀಸರ ನಡುವೆ ಚಕಮಕಿ ನಡೆದಿತ್ತು.
ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಪೊಲೀಸರು ಮರುದಿನ ವಿಚಾರಣೆ ನೆಪದಲ್ಲಿ ಜಯರಾಜ್ ರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಪುತ್ರ ಬೆನಿಕ್ಸ್ ನನ್ನು ಹಿಡಿದು ಥಳಿಸಿದ್ದಾರೆ. ನಂತರ ಕೇಸ್ ದಾಖಲಿಸಿ, ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಪುನಃ ತಮ್ಮ ವಶಕ್ಕೆ ಪಡೆದಿದ್ದಾರೆ.
ಜೈಲಿನಲ್ಲಿ ಅಪ್ಪ-ಮಗ ಇಬ್ಬರಿಗೂ ಪೊಲೀಸರು ಚಿತ್ರಹಿಂಸೆ ಕೊಟ್ಟಿದ್ದು, ಲೈಂಗಿಕ ದೌರ್ಜನ್ಯ ಕೂಡ ಎಸಗಿದ್ದಾರೆ ಎನ್ನಲಾಗಿದೆ. ಅಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದು, ಪೊಲೀಸರ ವಿರುದ್ಧ ತಮಿಳುನಾಡಿನ ಹಲವೆಡೆ ಆಕ್ರೋಶ ಭುಗಿಲೆದ್ದಿದೆ.
ಪೊಲೀಸರ ಈ ಅಮಾನವೀಯ ವರ್ತನೆ ಖಂಡಿಸಿ, ಇಡೀ ಘಟನೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿರುವ ಆರ್ ಜೆ ಸುಚಿತ್ರಾ, ಜಯರಾಜ್ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಅಭಿಯಾನ ನಡೆಸಿದ್ದಾರೆ. ಇದನ್ನು ಡಿಲೀಟ್ ಮಾಡುವಂತೆ ಪೊಲೀಸರು ಸೂಚಿಸಿದ್ದು, ಪೊಲೀಸರು ತಮ್ಮ ತಪ್ಪು ಮುಚ್ಚಿಕೊಳ್ಳಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಕೂಗು ಎದ್ದಿದೆ.