ದೇಶದಲ್ಲಿ ಅಬ್ಬರಿಸುತ್ತಿರುವ ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಹಲವು ತಿಂಗಳಿನಿಂದ ಬಂದ್ ಆಗಿವೆ. ಹೀಗಾಗಿ ಬಿಡುಗಡೆಗೆ ಸಿದ್ದವಾಗಿದ್ದ ಕೆಲವು ಚಿತ್ರಗಳನ್ನು ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಇದರ ಮಧ್ಯೆ ತಮಿಳು ರಾಕರ್ಸ್ ಎಂಬ ಹೆಸರು ಕೇಳಿದರೆ ಸಾಕು ಚಿತ್ರೋದ್ಯಮ ಬೆಚ್ಚಿ ಬೀಳುವಂತಾಗಿದೆ.
ಏಕೆಂದರೆ ನೂರಾರು ಕೋಟಿ ರೂಪಾಯಿ ಸುರಿದು ವರ್ಷಗಟ್ಟಲೆ ಸಿನಿಮಾ ಮಾಡಿ ಬಿಡುಗಡೆಯಾದ ದಿನವೇ ಮಧ್ಯಾಹ್ನದ ವೇಳೆಗೆ ಆ ಚಿತ್ರವನ್ನು ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ ಈ ತಮಿಳು ರಾಕರ್ಸ್.
ಅಂದರೆ ಇವರ ದಂಧೆಯೇ ಹೊಸ ಹೊಸ ಚಿತ್ರಗಳನ್ನು ಪೈರಸಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿದೆ.
ಈ ತಮಿಳು ರಾಕರ್ಸ್ ಕೇವಲ ತಮಿಳು ಚಿತ್ರೋದ್ಯಮಕ್ಕಷ್ಟೇ ಅಲ್ಲ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಇತರೆ ಭಾಷೆಗಳ ಚಿತ್ರಗಳ ಮೇಲೆ ಭಾರೀ ಪರಿಣಾಮವನ್ನು ಬೀರುತ್ತಿದೆ. ಚಿತ್ರ ತೆರೆ ಕಂಡ ಕೆಲವೇ ಗಂಟೆಗಳಲ್ಲಿ ಪೈರೇಟೆಡ್ ಚಿತ್ರ ಈ ರಾಕರ್ಸ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುತ್ತದೆ.
ತಮಿಳು ರಾಕರ್ಸ್ ಎಂಬ ವೆಬ್ ಸೈಟ್ ಪೈರಸಿ ಮಾಡುತ್ತಿದೆ ಎಂಬ ಆರೋಪದ ಮೇಲೆ ವೆಬ್ ಸೈಟ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಇನ್ನೊಂದು ಡೊಮೇನ್ ಮೂಲಕ ಮತ್ತೊಂದು ವೆಬ್ ಸೈಟ್ ಆರಂಭಿಸಿ ಅಲ್ಲಿ ಪೈರಸಿ ಮಾಡಲಾಗುತ್ತದೆ. ಹೀಗೆ ಹಲವು ವಿಧದಲ್ಲಿ ಪೈರಸಿ ಮಾಡಲಾಗುತ್ತಿದೆ.
ಅತ್ಯಂತ ಜನಪ್ರಿಯವಾಗಿರುವುದರಿಂದ ಜಾಹೀರಾತುಗಳ ಪ್ರಮಾಣ ಹೆಚ್ಚಾಗಿದ್ದು, ಲಕ್ಷಾಂತರ ರೂಪಾಯಿಯ ಆದಾಯ ಈ ತಮಿಳು ರಾಕರ್ಸ್ ಗೆ ಬರುತ್ತಿದೆ.