ಚೆನ್ನೈ: ತಮಿಳು ಕಿರುತೆರೆಯ ನಟಿ ಹಾಗೂ ಆಕೆಯ ಪತಿ ತಮ್ಮ ಮನೆಯಲ್ಲಿ ತಾವೇ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಕಥೆಯಿದು. ಖ್ಯಾತ ನಟಿ ಸುಚಿತ್ರಾ ಹಾಗೂ ಆಕೆಯ ಪತಿ ಮಣಿಕಂದನ್ ಆರೋಪಿಗಳು.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ನಟಿ ಸುಚಿತ್ರಾ, ಮಣಿಕಂದನ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಾಳೆ. ಆರಂಭದಲ್ಲಿ ಮಣಿಕಂದನ್ ಮನೆಯಲ್ಲಿ ಇದಕ್ಕೆ ಒಪ್ಪಿಲ್ಲವಾದರೂ ಬಳಿಕ ಒಪ್ಪಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದಾರೆ.
ಕೊರೊನಾದಿಂದಾಗಿ ಕೆಲಸವಿಲ್ಲದೇ ಇಬ್ಬರೂ ಸಂಕಷ್ಟಕ್ಕೀಡಾಗಿದ್ದಾರೆ. ಮನೆಯಲ್ಲಿ ಹಣ ಕೇಳಿದರೂ ಕೊಡುವುದಿಲ್ಲ ಎಂದು ಗೊತ್ತಾಗಿದೆ. ಈ ವೇಳೆ ಇಬ್ಬರಿಗೂ ಮನೆಯಲ್ಲಿನ ಒಡವೆ ಹಾಗೂ ಹಣದ ಮೇಲೆ ಕಣ್ಣು ಬಿದ್ದಿದೆ. ಇಬ್ಬರೂ ಹಣ-ಒಡವೆ ದೋಚುವ ಪ್ಲಾನ್ ಮಾಡಿದ್ದಾರೆ. ನನಗೆ ಕೆಲಸವಿದೆ ಎಂದು ನಟಿ ಸುಚಿತ್ರಾ ಒಂದಷ್ಟು ಹಣ – ಒಡವೆಯೊಂದಿಗೆ ಮನೆಯಿಂದ ಹೊರ ಹೋಗಿದ್ದಾಳೆ. ಇತ್ತ ಕಳ್ಳತನ ಮಾಡಲು ಮನೆಯಲ್ಲೇ ಉಳಿದ ಪತಿ ಮಣಿಕಂದನ್ ಕೆಲ ಸಮಯದ ಬಳಿಕ ಮನೆಯಲ್ಲಿದ್ದ ಇನ್ನಷ್ಟು ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾನೆ.
ಮನೆಯಲ್ಲಿ ಕಳ್ಳತನವಾದ ವಿಚಾರ ತಿಳಿದು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಮನೆಯವರೇ ಕದ್ದಿರುವ ವಿಚಾರ ತಿಳಿದು ಬಂದಿದೆ. ಆರೋಪಿ ಮಣಿಕಂದನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ನಟಿ ಸುಚಿತ್ರಾ ಮಾತ್ರ ನಾಪತ್ತೆಯಾಗಿದ್ದಾಳೆ.