ನವದೆಹಲಿ: ‘ಕೆಫೆ ಕಾಫೀ ಡೇ’ ಮೂಲಕ ಮನೆ ಮಾತಾಗಿದ್ದ ಉದ್ಯಮಿ ದಿ. ವಿ.ಜಿ. ಸಿದ್ದಾರ್ಥ ಅವರ ಜೀವನಾಧಾರಿತ ಚಲನಚಿತ್ರ ನಿರ್ಮಾಣವಾಗಲಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ದಿ. ವಿ.ಜಿ. ಸಿದ್ದಾರ್ಥ ಅವರ ಬದುಕಿನ ವಿಶಿಷ್ಟ ಸಂಗತಿಗಳನ್ನು ಒಳಗೊಂಡ ಪುಸ್ತಕ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಈ ಪುಸ್ತಕವನ್ನು ಆಧರಿಸಿ ಸಿನಿಮಾ ನಿರ್ಮಿಸುವುದಾಗಿ ಟಿ ಸಿರೀಸ್ ಕಂಪನಿ ಹೇಳಿದೆ.
ಟಿ ಸಿರೀಸ್ ಹಾಗೂ ಆಲ್ ಮೈಟಿ ಮೋಷನ್ ಪಿಕ್ಚರ್ ಜಂಟಿಯಾಗಿ ಸಿದ್ಧಾರ್ಥ ಜೀವನಾಧಾರಿತ ಚಿತ್ರ ನಿರ್ಮಾಣಕ್ಕೆ ತೀರ್ಮಾನಿಸಿವೆ. ಅತ್ಯಂತ ಶ್ರಮವಹಿಸಿ ಕೆಲವೇ ವರ್ಷಗಳಲ್ಲಿ ಯಶಸ್ವಿ ಉದ್ಯಮಿಯಾದ ಸಿದ್ಧಾರ್ಥ ಅವರ ಜೀವನ ಕುರಿತಾಗಿ ರುಕ್ಮಿಣಿ ಬಿ.ಆರ್. ಮತ್ತು ಪ್ರೊಸೇನ್ ಜಿತ್ ದತ್ತಾ ಅವರು ಬರೆದ, ಫ್ಯಾನ್ ಮ್ಯಾಕ್ಮಿಲನ್ ಇಂಡಿಯಾ ಕಂಪನಿ ಪ್ರಕಟಿಸಿರುವ ‘ಕಾಫಿ ಕಿಂಗ್: ದಿ ಸ್ಕ್ರಿಪ್ಟ್ ರೈಸ್ ಅಂಡ್ ಸಡನ್ ಡೆತ್ ಆಫ್ ಕೆಫೆ ಕಾಫಿ ಡೇ ಫೌಂಡರ್ ವಿ.ಜಿ. ಸಿದ್ಧಾರ್ಥ’ ಪುಸ್ತಕ ಮಾರುಕಟ್ಟೆಗೆ ಬರಲಿದೆ.
ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಸಹಯೋಗದಲ್ಲಿ ಲ್ಯಾಬಿರಿಂತ್ ಲಿಟ್ರೆಸಿ ಏಜೆನ್ಸಿಯಿಂದ ಪುಸ್ತಕದ ಹಕ್ಕುಗಳನ್ನು ಪಡೆದುಕೊಂಡಿರುವ ಟಿ ಸಿರೀಸ್ ಹಾಗೂ ಆಲ್ ಮೈಟಿ ಮೋಷನ್ ಪಿಕ್ಚರ್ ನ ಪ್ರಬ್ಲಿನ್ ಕೌರ್ ಸಂಧು ಅವರು ಚಿತ್ರ ನಿರ್ಮಾಣ ಮಾಡಲಿದ್ದಾರೆ.