ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆಯೇ ಹೊರತು, ಕೊಲೆಯಲ್ಲ ಎಂದು ಸಿಬಿಐಗೆ ಸಲ್ಲಿಕೆಯಾಗಿದೆ ಎನ್ನಲಾಗಿರುವ ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್ ವರದಿಯಲ್ಲಿ ಉಲ್ಲೇಖವಾಗಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ನಟಿ ಕಂಗನಾ ರಣಾವತ್, ಅಸಾಧಾರಣ ಯುವಪ್ರತಿಭೆಗಳು ಏಕಾಏಕಿ ತಮ್ಮನ್ನು ತಾವು ಕೊಂದುಕೊಳ್ಳುವುದಿಲ್ಲ. ಸುಶಾಂತ್ ತನ್ನ ಬದುಕಿನ ಬಗ್ಗೆ ಭೀತಿಗೊಂಡಿದ್ದರು. ಚಲನಚಿತ್ರ ಮಾಫಿಯಾ ತನ್ನನ್ನು ನಿಷೇಧಿಸಿದ್ದು, ಶೋಷಿಸುತ್ತಿದೆ ಎನ್ನುತ್ತಲೇ ಇದ್ದರು. ಸುಳ್ಳು ಅತ್ಯಾಚಾರ ಆರೋಪದಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದರು ಎಂದಿದ್ದಾರೆ.
ಅಷ್ಟೇ ಅಲ್ಲದೆ, ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ದೊಡ್ಡದೊಡ್ಡ ಚಿತ್ರ ಸಂಸ್ಥೆಗಳು ತನ್ನ ಮೇಲೆ ನಿಷೇಧ ಹೇರಿವೆ ಎಂಬುದನ್ನು ಸುಶಾಂತ್ ಪದೇ ಪದೇ ಹೇಳುತ್ತಿದ್ದರು. ಅವರ ವಿರುದ್ಧ ಸಂಚು ರೂಪಿಸಿದ ದೊಡ್ಡವರ್ಯಾರು ? ಮಾಧ್ಯಮಗಳೇಕೆ ಆತನನ್ನು ಅತ್ಯಾಚಾರಿ ಎನ್ನುವಂತೆ ಬಿಂಬಿಸಿದವು ? ಮಹೇಶ್ ಭಟ್ ಏಕೆ ಆತನ ಮನೋವಿಶ್ಲೇಷಣೆ ಮಾಡಿದ್ದು ? ಎಂದು ಪ್ರಶ್ನಿಸಿದ್ದಾರೆ.
ಚಿತ್ರರಂಗದಿಂದಲೇ ಆತನನ್ನು ದೂರ ಇಡುತ್ತಿರುವ ಕುರಿತು ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಯಶ್ ರಾಜ್ ಸಿನಿಮಾಗಳಿಂದ ಕೈಬಿಟ್ಟಿದ್ದಾಗಿ ಹೇಳಿದ್ದರು. ಬೆದರಿಕೆ ಇದೆ ಎನ್ನುತ್ತಿದ್ದರು. ಆತ್ಮಹತ್ಯೆಗೆ ಪ್ರೇರೇಪಿಸುವುದೂ ಕೊಲೆ. ಕಾನೂನಾತ್ಮಕವಾಗಿ ಹಾಗೂ ನೈತಿಕವಾಗಿ ಇದನ್ನು ಕೊಲೆ ಎಂದು ನಂಬಬಹುದು. ಆತ ಚಿತ್ರರಂಗ ತೊರೆಯಬೇಕು ಎಂದುಕೊಂಡಿದ್ದನೇ ಹೊರತು, ಬದುಕನ್ನಲ್ಲ. ಕೊಡಗಿನಲ್ಲಿ ಬದುಕು ನಡೆಸಬೇಕೆಂದಿದ್ದ. ಆತನನ್ನ ಹೆದರಿಸಿದ್ಯಾರು ? ಬದುಕಬೇಕು ಎಂದುಕೊಂಡವನನ್ನು ಸಾಯುವಂತೆ ಮಾಡಿದವರ್ಯಾರು ? ಈ ದುಷ್ಪ್ರೇರಣೆ ನೀಡುವುದು ಸಹ ಕೊಲೆಯೇ ಆಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.