ದಕ್ಷಿಣ ಆಫ್ರಿಕಾದ ಜೆರುಸಲೇಮಾ ಹಾಡು ಜಾಗತಿಕ ಹವಾ ಎಬ್ಬಿಸಿದೆ. ಈ ಹಾಡು ಇದೀಗ ಯೂಟ್ಯೂಬ್ ನಲ್ಲಿ 230 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯನ್ನು ಕಂಡಿದ್ದು, ಲಾಕ್ಡೌನ್ ಸಮಯದಲ್ಲಿ ಜಾಗತಿಕವಾಗಿ ಹಿಟ್ ಆದ ಹಾಡು ಎಂಬ ಖ್ಯಾತಿಯನ್ನೂ ಪಡೆದಿದೆ.
ಜುಲು ಸಾಹಿತ್ಯದಿಂದ ಈ ಹಾಡು ರಚನೆಯಾಗಿದ್ದು, ಕೊರೊನಾ ವೈರಸ್ ಇಡೀ ಪ್ರಪಂಚವನ್ನು ಕಾಡುತ್ತಿದ್ದ ಸಂದರ್ಭದಲ್ಲಿ ಬಿಡುಗಡೆಗೊಂಡಿತ್ತು. ಹೀಗಾಗಿ ಇದು ವಿಶ್ವದ ಮೂಲೆ ಮೂಲೆಯನ್ನು ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯೂ ಆಯಿತು. “ಜೆರುಸಲೇಮ್ ನನ್ನ ಮನೆ, ನನ್ನನ್ನು ಕಾಪಾಡು, ನನ್ನನ್ನು ಕರೆದೊಯ್ಯಿರಿ, ನನ್ನನ್ನು ಇಲ್ಲಿ ಬಿಡಬೇಡಿ. ಜೆರುಸಲೇಮ್ ನನ್ನ ಮನೆ, ನನ್ನ ಸ್ಥಳ ಇಲ್ಲಿಲ್ಲ, ನನ್ನ ರಾಜ್ಯವೂ ಇಲ್ಲಿಲ್ಲ” ಎಂಬ ಸಾಲುಗಳು ಈ ಹಾಡಿನಲ್ಲಿದೆ.
ಈ ಹಾಡನ್ನು ದಕ್ಷಿಣ ಆಫ್ರಿಕಾದ ಸಂಗೀತಗಾರರಾದ ಮಾಸ್ಟರ್ ಕೆ.ಜಿ. ಎಂಬ ಖ್ಯಾತಿಯ ಕಗೋಜೆಲೋ ಮೊಗಿ ಹಾಡಿದ್ದು, ನೋಸೆಂಬೋ ಜಿಕೋಡ್ ಎಂಬ ಇನ್ನೊಬ್ಬ ಸಂಗೀತಗಾರನೊಂದಿಗೆ ಗೀತ ರಚನೆ ಮಾಡಿ, ಹಾಡಿನ ವಿಡಿಯೋ ಪ್ರದರ್ಶನ ಮಾಡಿದ್ದಾರೆ. ಇದನ್ನು ಅಪ್ಲೋಡ್ ಮಾಡಿ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿದ್ದು, ಬಳಿಕ ಜೆರುಸಲೇಮ್ ಡಾನ್ಸ್ ಚಾಲೆಂಜ್ ಸಹ ನಡೆಯಿತು. ನೆಟ್ಟಿಗರಿಂದ ಭರಪೂರ ಪ್ರತಿಕ್ರಿಯೆಗಳು ಲಭ್ಯವಾಗಿವೆ.