
ಮುಂಬೈ: ಮುಂಬೈನ ಚೆಂಬೂರಿನಲ್ಲಿ ಸೋಮವಾರ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಗಾಯಕ ಸೋನು ನಿಗಮ್ ಮತ್ತು ಅವರ ತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ.
ನಾಟಕೀಯ ಘಟನೆಗಳ ನಂತರ, ಸೋನು ನಿಗಮ್ ಚೆಂಬೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಶಿವಸೇನಾ(ಯುಬಿಟಿ) ನಾಯಕ ಪ್ರಕಾಶ್ ಫಾಟರ್‌ಪೇಕರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋನು ನಿಗಮ್ ಚೆಂಬೂರ್‌ಗೆ ಬಂದಿದ್ದರು. ಅವರು ವೇದಿಕೆಯಿಂದ ಕೆಳಗೆ ಹೋಗುತ್ತಿದ್ದಾಗ ಕೆಲವರು ಗಾಯಕನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಸೋನು ನಿಗಮ್ ಅಂಗರಕ್ಷಕರು ತಡೆದಾಗ ತಳ್ಳಾಟ ನಡೆದು ಹಲ್ಲೆ ಮಾಡಲಾಗಿದೆ.
ಸೋನು ನಿಗಮ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು, ಆ ಸಮಯದಲ್ಲಿ ಅಂಗರಕ್ಷಕರು ಆ ಜನರನ್ನು ತಳ್ಳಲು ಪ್ರಯತ್ನಿಸಿದರು, ಆದರೆ, ಸೋನು ನಿಗಮ್ ತಂಡದ ಒಬ್ಬ ವ್ಯಕ್ತಿಯನ್ನು ತಳ್ಳಲಾಯಿತು, ಸೋನು ನಿಗಮ್ ಗೆ ಏನೂ ಆಗಿಲ್ಲ ಎಂದು ಶಿವಸೇನೆ(ಯುಬಿಟಿ) ನಾಯಕ ಪ್ರಕಾಶ್ ಫಾಟರ್‌ಪೇಕರ್ ಹೇಳಿದ್ದಾರೆ.
ಸೋನು ನಿಗಮ್ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಶಾಸಕರ ಪುತ್ರ ಸೋನು ನಿಗಮ್ ಅವರ ಅಂಗರಕ್ಷಕ ಹರಿಯನ್ನು ತಳ್ಳಿ ನಂತರ ಸೋನು ಅವರನ್ನು ತಳ್ಳಿದರು. ಈ ವೇಳೆ ಸೋನು ನಿಗಮ್ ಅವರ ತಂಡದ ರಬ್ಬಾನಿ ಖಾನ್ ಕೂಡ ಉಪಸ್ಥಿತರಿದ್ದರು. ಅವರು ವೇದಿಕೆಯಿಂದ ಕೆಳಗೆ ಬಿದ್ದಿದ್ದಾರೆ. ಗಲಾಟೆಯಲ್ಲಿ ಹಲವು ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಚೆಂಬೂರಿನ ಝೆನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂಪೂರ್ಣ ಘಟನೆಯಿಂದ ಸೋನು ನಿಗಮ್ ಆತಂಕಗೊಂಡು ಠಾಣೆಗೆ ತೆರಳಿ ದೂರು ನೀಡಿದ್ದಾರೆ.