‘ನಾಟು ನಾಟು’ ಹಾಡಿಗಾಗಿ ‘RRR’ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದು ಇತಿಹಾಸ ಬರೆದಿದೆ. ಇದಕ್ಕಾಗಿ ಪ್ರತಿಯೊಬ್ಬ ಭಾರತೀಯ ಹೆಮ್ಮೆಯಿಂದ ಬೀಗುತ್ತಿದ್ದಾರೆ.
ಪ್ರಶಸ್ತಿ ಸ್ವೀಕಾರ ವೇಳೆ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್ ಹೊರತುಪಡಿಸಿ ಎಲ್ಲರೂ ನಿರ್ಗಮನ ದ್ವಾರದ ಬಳಿ ಕುಳಿತಿದ್ದರು. ಇದು ಟೀಕೆಗೆ ಕಾರಣವಾಗಿತ್ತು.
ಆ ಸೀಟುಗಳನ್ನು ‘RRR’ ಚಿತ್ರ ತಂಡಕ್ಕಾಗಿ ಅಕಾಡೆಮಿಯಿಂದ ಕಾಯ್ದಿರಿಸಿರಲಿಲ್ಲ. ಯಾವುದೇ ಉಚಿತ ಟಿಕೆಟ್‌ಗಳನ್ನು ಸ್ವೀಕರಿಸದ ಕಾರಣ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರೇ ಟಿಕೆಟ್ ಖರೀದಿಸಬೇಕಾಯಿತು. ನಾಟು ನಾಟು ಸಂಯೋಜಕ ಎಂ.ಎಂ. ಕೀರವಾಣಿ, ಗೀತರಚನೆಕಾರ ಚಂದ್ರಬೋಸ್ ಮತ್ತು ಅವರ ಪತ್ನಿಯರಿಗೆ ಮಾತ್ರ ಆಸ್ಕರ್ 2023 ಗೆ ಉಚಿತ ಪ್ರವೇಶ ನೀಡಲಾಗಿದೆ. ಅಕಾಡೆಮಿ ಪ್ರಶಸ್ತಿ ಸಿಬ್ಬಂದಿ ಪ್ರಕಾರ, ಪ್ರಶಸ್ತಿ ಪುರಸ್ಕೃತರು ಮತ್ತು ಅವರ ಕುಟುಂಬ ಸದಸ್ಯರು ಮಾತ್ರ ಉಚಿತ ಪಾಸ್‌ಗೆ ಅರ್ಹರಾಗಿರುತ್ತಾರೆ. ಈವೆಂಟ್ ಅನ್ನು ನೇರವಾಗಿ ವೀಕ್ಷಿಸಲು ಎಲ್ಲರೂ ಟಿಕೆಟ್‌ಗಾಗಿ ಪಾವತಿಸಬೇಕಾಗಿತ್ತು.
ಹೀಗಾಗಿ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಎಸ್.ಎಸ್. ರಾಜಮೌಳಿ ಅವರು ತಮ್ಮ ತಂಡದ ಇತರ ಸದಸ್ಯರಿಗೆ ಟಿಕೆಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಆಸ್ಕರ್ 2023 ರ ಟಿಕೆಟ್ ಪ್ರತಿ ವ್ಯಕ್ತಿಗೆ 25,000 $ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ, ಇದು 20.6 ಲಕ್ಷ ರೂ.ಗೆ ಸಮಾನವಾಗಿದೆ.
ಎಸ್.ಎಸ್. ರಾಜಮೌಳಿ ತಮ್ಮ ಪತ್ನಿ ರಮಾ ರಾಜಮೌಳಿ, ಮಗ ಕಾರ್ತಿಕೇಯ ಮತ್ತು ಸೊಸೆಯೊಂದಿಗೆ ಪ್ರತಿಷ್ಠಿತ ಸಮಾರಂಭದಲ್ಲಿ ಭಾಗವಹಿಸಿದ್ದರು. ಚಿತ್ರದ ನಾಯಕ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಕೂಡ ತಮ್ಮ ಪತ್ನಿಯರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಂದೆರಡು ದಿನಗಳ ಹಿಂದಷ್ಟೇ ಅಕಾಡೆಮಿ ಅವರಿಗೆ ಕೊನೆಯ ಸಾಲಿನ ಸೀಟುಗಳನ್ನು ನೀಡಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಈಗ ಅಸಲಿ ವಿಷಯ ಇದೆಂದು ಹೇಳಲಾಗಿದೆ.