ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕ್ಷಣ ಕ್ಷಣಕ್ಕೂ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಬೆಳಿಗ್ಗೆ 10 ಗಂಟೆಯ ನಂತರ ಆಸ್ಪತ್ರೆಯಿಂದ ಶಿವರಾಂ ಅವರ ಆರೋಗ್ಯದ ಕುರಿತಾಗಿ ಮಾಹಿತಿ ನೀಡಲಾಗುವುದು.
ಮಿದುಳು ನಿಷ್ಕ್ರಿಯಗೊಂಡು ಶಿವರಾಂ ಕೋಮಾ ಸ್ಥಿತಿಯಲ್ಲಿದ್ದಾರೆ. ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಬೆಂಗಳೂರಿನ ಸೀತಾ ಸರ್ಕಲ್ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಶಿವರಾಂ ಕೋಮಾಸ್ಥಿತಿ ತಲುಪಿರುವುದರಿಂದ ಕುಟುಂಬದವರು, ಅಭಿಮಾನಿಗಳ ವಲಯದಲ್ಲಿ ಆತಂಕ ಮೂಡಿದೆ. ಸ್ಯಾಂಡಲ್ವುಡ್ ನ ಅನೇಕ ಹಿರಿಯ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ ಶಿವರಾಂ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲಿಯೂ ಶಿವರಾಂ ಅಭಿನಯಿಸಿದ್ದಾರೆ. ಆರು ದಶಕಗಳಿಗೂ ಹೆಚ್ಚು ಅವಧಿಯಿಂದ ಅವರು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.