ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿ ಸ್ಥಳದಲ್ಲಿ 11 ನೇ ದಿನದ ಕಾರ್ಯ ನೆರವೇರಿಸಲಾಗಿದೆ.
ಪೂಜೆ ನೆರವೇರಿಸಿದ ನಂತರ ಮಾತನಾಡಿದ ಶಿವರಾಜಕುಮಾರ್ ಅವರು, ಇದನ್ನು ನಂಬಲಾಗುತ್ತಿಲ್ಲ. ನೋವಾಗುತ್ತಿದೆ. ಅಪ್ಪುಗೆ 11 ನೇ ದಿನದ ಕಾರ್ಯ ಮಾಡಬೇಕಾ? ನನ್ನ ಮಗನಂತಿದ್ದ ಮಗನೇ ಹೋಗಿದ್ದಾನೆ. ನೋವಿನ ಜೊತೆಯಲ್ಲೇ 11 ನೇ ದಿನದ ಕಾರ್ಯ ನೆರವೇರಿಸಲಾಗಿದೆ. ಸಂಪ್ರದಾಯದ ಪ್ರಕಾರ 11 ನೇ ದಿನದ ಕಾರ್ಯ ನೆರವೇರಿಸಲಾಗಿದೆ. ಅಭಿಮಾನಿಗಳಿಗೂ ನೋವಾಗಿದೆ. ಅವರಿಗೂ ನಂತರ ಸಮಾಧಿ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದರು.
ಅಪ್ಪು ಇಲ್ಲದ ನೋವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಆಗುವುದು ಆಗಿ ಹೋಗಿದೆ. ಮುಂದೆ ಆಗಬೇಕಿರುವ ಕಾರ್ಯಗಳ ಬಗ್ಗೆ ಗಮನಹರಿಸಬೇಕಿದೆ. ಅಳುವುದು, ದುಃಖ ತೋಡಿಕೊಳ್ಳುವುದು ಬಿಟ್ಟು ದಾರಿ ಇಲ್ಲ. ನನ್ನ ಜೀವ ಇರುವವರೆಗೂ ಅಪ್ಪು ನೆನಪು ಕಾಡಲಿದೆ. ಜನಗಳು, ಅಭಿಮಾನಿಗಳಿಗೆ ಆಗಿರುವ ನೋವು ದೊಡ್ಡದು. ಯಾರೂ ಪ್ರಾಣ ಕಳೆದುಕೊಳ್ಳಬೇಡಿ. ಅಪ್ಪು ಹೆಸರನ್ನು ಉಳಿಸಲು ನೋಡಿ. ನಿಮ್ಮ ಫ್ಯಾಮಿಲಿ ಬಗ್ಗೆ ಯೋಚನೆ ಮಾಡಿ. ಅಪ್ಪು ಹಾಕಿಕೊಟ್ಟ ದಾರಿಯಲ್ಲಿ ಮುಂದುವರೆಯಿರಿ. ಶಿಕ್ಷಣ ಇತರೆ ಕಾರ್ಯಕ್ಕೆ ನೆರವಾಗಿ. ಅಪ್ಪು ದಾರಿಯಲ್ಲಿ ನೀವು ನಡೆಯಿರಿ. ಕೈಮುಗಿದು ಬೇಡಿಕೊಳ್ಳುತ್ತೇನೆ. ಯಾರೂ ದುಡುಕಬೇಡಿ ಎಂದು ತಿಳಿಸಿದ್ದಾರೆ.
ಅಪ್ಪು ನೋಡಲು ಆಗುವುದಿಲ್ಲ ಎನ್ನುವ ನೋವನ್ನು ಪದಗಳಲ್ಲಿ ಹೇಳಲು ಆಗಲ್ಲ. ಅಪ್ಪು ತಂದೆಗೆ ತಕ್ಕ ಮಗನಂತಹ ವ್ಯಕ್ತಿತ್ವ ಹೊಂದಿದ್ದರು. ಪದ್ಮಶ್ರೀ ಕೊಟ್ಟರೆ ಅವನಿಗೆ ಹೆಸರಿನ ಪಕ್ಕದ ಟೈಟಲ್ ಇರುತ್ತದೆ, ಅಪ್ಪು ಅಭಿಮಾನಿಗಳಲ್ಲಿ ಅಮರಶ್ರೀಯಾಗಿರುತ್ತಾನೆ. ಅದಕ್ಕಿಂತ ದೊಡ್ಡದು ಇನ್ನೇನಿದೆ ಎಂದು ಶಿವಣ್ಣ ಹೇಳಿದ್ದಾರೆ.