ಬೆಂಗಳೂರು: ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಅಳಬಾರದು ಎಂದುಕೊಂಡಿದ್ದೇನೆ. ಆದರೆ, ಅಪ್ಪು ನಗು ಮುಖ ನೋಡಿದ ತಕ್ಷಣ ಕಣ್ಣೀರು ಬರುತ್ತದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆರ್ಯ ಈಡಿಗರ ಸಂಘದಿಂದ ನಡೆದ ಪುನೀತ್ ರಾಜಕುಮಾರ್ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿ ಕಣ್ಣೀರಿಟ್ಟಿದ್ದಾರೆ. ಅಳಬಾರದು ಎಂದುಕೊಂಡಿದ್ದೇನೆ. ಆದರೆ, ಅಪ್ಪು ನಗು ಮುಖ ನೋಡಿದಾಗ ಕಣ್ಣೀರು ಬರುತ್ತದೆ. ಅಪ್ಪು ಬಗ್ಗೆ ಯಾವಾಗಲೂ ಮಾತನಾಡುತ್ತೇನೆ. ಎಲ್ಲರೂ ಅಪ್ಪು ನಿಮ್ಮಂತೆ ಕಾಣ್ತಾರೆ ಅಂದಿದ್ದರು. ಆದರೆ, ನಾನು ತಮ್ಮನಂತೆ ಇದ್ದೇನೆ ಎನ್ನುತ್ತಿದ್ದೆ. ನಾನು ಅಪ್ಪು ಜಗಳ ಆಡಿಲ್ಲ. ನನ್ನನ್ನು ಶಿವಣ್ಣ ಎಂದು ಕರೆಯುತ್ತಿದ್ದ ಅಪ್ಪು ಸಮಾಜಕ್ಕೆ ಉಡುಗೊರೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅಪ್ಪು ಹುಟ್ಟಿದ್ದು ಬೆಳೆದಿದ್ದು ರಾಯಲ್ ಆಗಿ. ರಾಯಲ್ ಆಗಿಯೇ ನನ್ನ ತಮ್ಮ ಅಪ್ಪು ಹೋಗಿಬಿಟ್ಟ. ಅಪ್ಪು ಕಳೆದುಕೊಂಡ ನೋವು ಕಡಿಮೆ ಆಗಲ್ಲ. ಯಾವಾಗಲೂ ಮನಸ್ಸಿನಲ್ಲಿರಲಿದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಫ್ಯಾಮಿಲಿ ಬಗ್ಗೆ ಯೋಚನೆ ಮಾಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಅಪ್ಪು ಜೊತೆ ಜಗಳ ಮಾಡುವಂತಹ ಸಂದರ್ಭ ಬಂದೇ ಇಲ್ಲ. ಯಾವತ್ತೂ ಅಣ್ಣ ಎಂದು ಕರೆಯುತ್ತಿರಲಿಲ್ಲ. ಶಿವಣ್ಣ ಶಿವಣ್ಣ ಎಂದು ಕರೆಯುತ್ತಿದ್ದ. ಅಪ್ಪು ದಾರಿ ನೆನಪಿಸಿಕೊಂಡು ನಾವೆಲ್ಲ ಮುಂದೆ ಸಾಗೋಣ ಎಂದು ತಿಳಿಸಿದ್ದಾರೆ.