
ಬೆಂಗಳೂರು: ಕೊರೋನಾ ಕಾರಣದಿಂದ ಚಿತ್ರರಂಗ ಸಂಕಷ್ಟದಲ್ಲಿದ್ದು ಸಮಸ್ಯೆಗಳ ಬಗ್ಗೆ ಚರ್ಚಿಸಲು ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದ್ದು, ಚಿತ್ರರಂಗದ ವಿವಿಧ ಸಂಘಟನೆಗಳ ಪ್ರಮುಖರು ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 12.30 ಕ್ಕೆ ಶಿವರಾಜ್ ಕುಮಾರ್ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಮಾಪಕರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ಸೇರಿದಂತೆ ಚಿತ್ರರಂಗದ ಹಲವರು ಭಾಗಿಯಾಗಲಿದ್ದಾರೆ.
ಕೊರೋನಾ ಕಾರಣದಿಂದ ಚಿತ್ರರಂಗ ಸಂಕಷ್ಟ ಎದುರಿಸುತ್ತಿದ್ದು, ಹಲವರು ಮಾತನಾಡಬೇಕೆಂದು ಹೇಳಿದ್ದಾರೆ. ಇದಕ್ಕೆ ಒಪ್ಪಿದ್ದೇನೆ. ಚಿತ್ರರಂಗದ ಸಮಸ್ಯೆಗಳ ಕುರಿತಾಗಿ ಚರ್ಚಿಸಲು ನಮ್ಮ ಮನೆಯ ಬಾಗಿಲು ತೆರೆದಿರುತ್ತದೆ. ಇಲ್ಲಿ ಯಾರು ನಾಯಕತ್ವ ವಹಿಸಿಕೊಳ್ಳುತ್ತಾರೆ ಎನ್ನುವುದಕ್ಕಿಂತ ಚಿತ್ರರಂಗಕ್ಕೆ ಏನು ಕೆಲಸವಾಗಬೇಕಿದೆ ಎನ್ನುವುದು ಮುಖ್ಯವಾಗಿದೆ ಎಂದು ಶಿವಣ್ಣ ಹೇಳಿದ್ದಾರೆ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚಿತ್ರರಂಗದ ಸಂಕಷ್ಟಗಳ ಕುರಿತಾಗಿ ನಡೆಯುತ್ತಿರುವ ಸಭೆ ಮಹತ್ವ ಪಡೆದುಕೊಂಡಿದೆ.