ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ ಬಗ್ಗೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, SFL ಕಂಪನಿಯಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ನನಗೂ ಕಂಪನಿ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ವ್ಯವಹಾರಗಳನ್ನು ಕಾಶಿಫ್ ಖಾನ್ ನೋಡಿಕೊಳ್ಳುತ್ತಿದ್ದ. SFL ಕಂಪನಿ ಮಾಲೀಕ ಕಾಶಿಫ್ ಖಾನ್ ಆಗಿದ್ದು, ನನಗೂ ಕಂಪನಿ ವ್ಯವಹಾರಕ್ಕೆ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಕಂಡು ಅಚ್ಚರಿಯಾಗಿದೆ ಎಂದು ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ 1.51 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ. SFL ಫಿಟ್ ನೆಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿ ವಂಚಿಸಿದ್ದಾರೆ ಎಂದು ಮುಂಬೈ ಉದ್ಯಮಿ ನಿತಿನ್ ಬುರಾರಿ ಮುಂಬೈ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದರು.
ಕಳೆದ 28 ವರ್ಷಗಳಿಂದ ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನನ್ನ ಹೆಸರು ಮತ್ತು ಪ್ರತಿಷ್ಠೆಗೆ ಹಾನಿಯಾಗುತ್ತಿರುವುದು ನನಗೆ ನೋವು ತಂದಿದೆ. ಭಾರತದಲ್ಲಿ ಕಾನೂನು ಪಾಲಿಸುವ ಹೆಮ್ಮೆಯ ನಾಗರಿಕಳಾಗಿರುವ ನನ್ನ ಹಕ್ಕುಗಳನ್ನು ರಕ್ಷಿಸಬೇಕು ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.