ಯಶ್ ಛೋಪ್ರಾ ನಿರ್ಮಾಣದ ಆದಿತ್ಯ ಛೋಪ್ರಾ ನಿರ್ದೇಶನದ ‘ದಿಲ್ ವಾಲೇ ದುಲ್ಹನಿಯಾ ಲೇಜಾಯೆಂಗೇ’ ಭಾರತದ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದ ಚಿತ್ರ. 1995 ರ ಅಕ್ಟೋಬರ್ 22 ರಂದು ಬಿಡುಗಡೆಯಾದ ಈ ಚಿತ್ರ ಮುಂಬೈನ ಮರಾಠ ಚಿತ್ರಮಂದಿರದಲ್ಲಿ 1000 ವಾರಗಳನ್ನು ಪೂರೈಸಿತ್ತು.
ಶಾರೂಕ್ ಖಾನ್, ಕಾಜೋಲ್, ಅಮರೀಷ್ ಪುರಿ, ಅನುಪಮ್ ಖೇರ್ ಮೊದಲಾದವರು ನಟಿಸಿದ್ದ ಈ ಚಿತ್ರದ ಹಾಡುಗಳು ಇಂದಿಗೂ ಚಿತ್ರಪ್ರೇಮಿಗಳ ಬಾಯಲ್ಲಿ ಗುನುಗುನಿಸುತ್ತವೆ. ಪ್ರವಾಸದ ವೇಳೆ ತಿಕ್ಕಾಟಗಳ ಮೂಲಕವೇ ಪ್ರೇಮದಲ್ಲಿ ಸಿಲುಕುವ ರಾಜ್ ಮತ್ತು ಸಿಮ್ರಾನ್ ತಮ್ಮ ಪ್ರೀತಿಗೆ ಹಿರಿಯರ ಅಶೀರ್ವಾದ ಪಡೆಯಲು ಪಡುವ ಪರಿಪಾಟಲುಗಳ ಸುತ್ತ ಚಿತ್ರದ ಕಥೆ ಇದ್ದು, ಯುರೋಪ್ ಮತ್ತು ಭಾರತದಲ್ಲಿ ಚಿತ್ರೀಕರಣ ನಡೆದಿತ್ತು.
ಈ ಚಿತ್ರಕ್ಕೆ ‘ದಿಲ್ ವಾಲೇ ದುಲ್ಹನಿಯಾ ಲೇಜಾಯೆಂಗೇ’ ಎಂಬ ಹೆಸರು ಸೂಚಿಸಿದವರು ನಟ ಅನುಪಮ್ ಖೇರ್ ಪತ್ನಿ ಕಿರಣ್ ಖೇರ್. ಅಲ್ಲದೇ ಈ ಚಿತ್ರದಲ್ಲಿ ಶಾರೂಕ್ ಖಾನ್ ಗೆಳೆಯನ ಪಾತ್ರದಲ್ಲಿ ಖ್ಯಾತ ನಿರ್ದೇಶಕ ಕರಣ್ ಜೋಹರ್ ಸಹ ನಟಿಸಿದ್ದಾರೆ. ಮಂದಿರಾ ಬೇಡಿಗೆ ಇದು ಮೊದಲ ಬಾಲಿವುಡ್ ಚಿತ್ರವಾಗಿತ್ತು. ಈ ಚಿತ್ರ ಫ್ಲಾಪ್ ಚಿತ್ರವಾಗಲಿದೆ ಎಂದು ಬಾಲಿವುಡ್ ಪಂಡಿತರು ಭವಿಷ್ಯ ನುಡಿದಿದ್ದು ಎಲ್ಲರ ನಿರೀಕ್ಷೆಯನ್ನೂ ಹುಸಿ ಮಾಡಿ ಚಿತ್ರ ಭರ್ಜರಿ ಯಶಸ್ಸು ಗಳಿಸಿತು.
ನಟ ಸಲ್ಮಾನ್ ಖಾನ್ ಮಾತ್ರ ‘ದಿಲ್ ವಾಲೇ ದುಲ್ಹನಿಯಾ ಲೇಜಾಯೆಂಗೇ’ ಖಂಡಿತ ಯಶಸ್ವಿಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅಂದಿನ ಕಾಲದಲ್ಲಿ ನಾಲ್ಕು ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಈ ಚಿತ್ರ ಗಳಿಸಿದ್ದು ಬರೋಬ್ಬರಿ 120 ಕೋಟಿ ರೂ. ಚಿತ್ರದ ಸಂಗೀತ ನಿರ್ದೇಶಕ ಜತಿನ್ ಲಲಿತ್ ಒಂದು ಹಾಡಿಗೆ ಸುಮಾರು 20 ಟ್ಯೂನ್ ಹಾಕಿದ್ದರು. ಬಿಡುಗಡೆಯ ನಂತರ ಚಿತ್ರದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆದವು.
ಎಲ್ಲಕ್ಕಿಂತ ಮುಖ್ಯವಾಗಿ ಈ ಚಿತ್ರದಲ್ಲಿ ಶಾರೂಕ್ ಖಾನ್ ಅವರ ಹೆಸರನ್ನು ‘ರಾಜ್’ ಎಂದು ಇಡಲು ಚಿತ್ರದ ನಿರ್ದೇಶಕ ಆದಿತ್ಯ ಛೋಪ್ರಾಗೆ ಬಾಲಿವುಡ್ ಶೋ ಮ್ಯಾನ್ ರಾಜ್ ಕಪೂರ್ ಮೇಲಿದ್ದ ಅಭಿಮಾನವೇ ಕಾರಣವಾಗಿತ್ತು. ಶಾರೂಕ್ ಖಾನ್ ಅವರಿಗೆ ಈ ಹೆಸರು ಎಷ್ಟು ಆಪ್ತವಾಯಿತೆಂದರೆ ಅವರ ಮುಂದಿನ ಬಹುತೇಕ ಚಿತ್ರಗಳಲ್ಲಿ ಅವರ ಪಾತ್ರದ ಹೆಸರು ರಾಜ್ ಎಂದೇ ಆಗಿರುತ್ತಿತ್ತು.
ಹೀಗೆ ತೆರೆ ಮೇಲೆ ಹಾಗೂ ತೆರೆಯ ಹಿಂದೆ ಕೆಲಸ ಮಾಡಿದವರ ಎಲ್ಲರ ಪರಿಶ್ರಮದ ಕಾರಣಕ್ಕಾಗಿ ‘ದಿಲ್ ವಾಲೇ ದುಲ್ಹನಿಯಾ ಲೇಜಾಯೆಂಗೇ’ ಭಾರತದ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣ ಮಾಡಲು ಸಾಧ್ಯವಾಯಿತ್ತಲ್ಲದೇ ಶತ ಕೋಟಿ ಗಳಿಸಿದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.