ವಿಶಾಖಪಟ್ಟಣ: ಬಾಲಿವುಡ್ ನಟ ಸೋನು ಸೂದ್ ಅವರ ಹೆಸರು ಕಳೆದ ಕೆಲ ತಿಂಗಳಿಂದ ದೇಶದಲ್ಲಿ ಮನೆ ಮಾತಾಗಿದೆ. ಕೊರೊನಾ ವೈರಸ್ ಲಾಕ್ ಡೌನ್ ಘೋಷಣೆಯಾದಾಗಿನಿಂದ ತೊಂದರೆಗೊಳಗಾದ ದೇಶದ ವಿವಿಧ ಭಾಗಗಳ ಅದೆಷ್ಟೋ ಜನರಿಗೆ ನೆರವಿನ ಹಸ್ತ ಚಾಚುವ ಮೂಲಕ ಸೋನು ನಿಜವಾದ ಹೀರೋ ಎನಿಸಿದ್ದಾರೆ.
ಈಗ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಸಾಲೂರು ಮಂಡಲದ ಕೊಡಮಬರಿ ಎಂಬ ಬುಡಕಟ್ಟು ಜನರಿರುವ ಕುಗ್ರಾಮಕ್ಕೆ ರಸ್ತೆ ಮಾಡಿಕೊಡುವ ಭರವಸೆಯನ್ನು ಸೋನು ಸೂದ್ ನೀಡಿ ಅಲ್ಲಿನ ಜನರ ಕಣ್ಮಣಿ ಎನಿಸಿದ್ದಾರೆ. ಶೀಘ್ರದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಬಹು ದೀರ್ಘ ಕಾಲದಿಂದ ಇರುವ ರಸ್ತೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಟ್ವಿಟರ್‌ನಲ್ಲಿ ಭರವಸೆ ನೀಡಿದ್ದಾರೆ.
ಒಡಿಶಾ ರಾಜ್ಯದ ಗಡಿಯಲ್ಲಿರುವ ಗ್ರಾಮ ಇದಾಗಿದ್ದು, 200 ಬುಡಕಟ್ಟು ಕುಟುಂಬಗಳು ಇಲ್ಲಿ ವಾಸಿಸುತ್ತವೆ. ತಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸೋನು ಭರವಸೆ ನೀಡಿದ ಖುಷಿಯಲ್ಲಿ ಗ್ರಾಮಸ್ಥರು ಸೋನು ಸೂದ್ ಅವರ ಬ್ಯಾನರ್ ನ್ನು ಕಚ್ಚಾ ರಸ್ತೆಯ ಪಕ್ಕ ಹಾಕಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಾಲೂರು ಎಂಎಲ್‌ಎ ಪೀಡಿಕಾ ರಾಜನ್ ಡೋರಾ ಅವರು ಸೋನು ಸೂದ್ ಅವರಿಗೆ ಪತ್ರ ಬರೆದು ಗ್ರಾಮಕ್ಕೆ ಬರುವಂತೆ ಮನವಿ ಮಾಡಿದ್ದಾರೆ.