ಬಾಲಿವುಡ್ ನಟ ಸಂಜಯ್ ದತ್, ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇದೀಗ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಅಮೆರಿಕಾಗೆ ತೆರಳಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಇದೆ.
ಸದ್ಯ ಅವರು ಮುಂಬೈನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರೋಗದ ಕುರಿತು ಇನ್ನಷ್ಟು ಚಿಕಿತ್ಸೆಯ ಅಗತ್ಯ ಇರುವುದರಿಂದ ಅವರು ವೀಸಾಗೆ ಅರ್ಜಿ ಸಲ್ಲಿಸಿದ್ದರು.
ಅವರು ವೀಸಾ ಪಡೆದುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ ಎಂಬ ಮಾತು ಕೇಳಿಬಂದಿದೆ, 1993ರ ಮುಂಬೈ ಸ್ಫೋಟದ ಪ್ರಕರಣದಲ್ಲಿ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.
ಆದರೆ ವೈದ್ಯಕೀಯ ಆಧಾರದ ಮೇಲೆ ವೀಸಾ ಪಡೆದುಕೊಳ್ಳಲು ಆಪ್ತರೊಬ್ಬರು ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಅವರು ಪತ್ನಿ ಮಾನ್ಯತಾ ಮತ್ತು ಸಹೋದರಿ ಪ್ರಿಯಾರೊಂದಿಗೆ ನ್ಯೂಯಾರ್ಕ್ ಗೆ ತೆರಳಲಿದ್ದು, ಕ್ಯಾನ್ಸರ್ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುವರು. 1980-81ರಲ್ಲಿ ತಾಯಿ ನರ್ಗಿಸ್ ದಾಖಲಾಗಿದ್ದ ಆಸ್ಪತ್ರೆಯಲ್ಲೇ ಸಂಜಯ್ ದತ್ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ ಎಂಬುದು ವಿಶೇಷ ಸಂಗತಿ.