ಬೆಂಗಳೂರು: ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ನಟ ಸಂಚಾರಿ ವಿಜಯ್ ಗಂಭೀರ ಸ್ಥಿತಿಯಲ್ಲಿದ್ದಾರೆ.
ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು 48 ಏನು ಹೇಳಲು ಸಾಧ್ಯವಿಲ್ಲ ಎಂದು ಅಪೊಲೋ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ನಿನ್ನೆ ರಾತ್ರಿಯೇ ಮೆದುಳಿನ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ತೊಡೆಗಾಯದ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಅಪೋಲೊ ಆಸ್ಪತ್ರೆಗೆ ದಾಖಲಿಸುವಾಗಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಬಲಭಾಗದ ಮೆದುಳಿಂದ ತೀವ್ರ ರಕ್ತಸ್ರಾವವಾಗಿ ನಿನ್ನೆ ರಾತ್ರಿಯಿಂದಲೇ ಪ್ರಜ್ಞೆಯಿಲ್ಲವಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಗೆಳೆಯರ ಬಳಗದೊಂದಿಗೆ ನೆರವಾಗುತ್ತಿರುವ ಸಂಚಾರಿ ವಿಜಯ್ ನಿನ್ನೆ ರಾತ್ರಿ ಫುಡ್ ಕಿಟ್ ಕೊಟ್ಟು ಮನೆಗೆ ವಾಪಸ್ ಬರುವಾಗ ಅಪಘಾತ ನಡೆದಿದೆ. ಬೈಕ್ ಹಿಂಬದಿ ಕುಳಿತಿದ್ದ ವಿಜಯ್ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆ ಬಳಿಕ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯ್ ಸ್ನೇಹಿತರು ಅವರ ಮಾನವೀಯ ಗುಣದ ಬಗ್ಗೆ ಕೊಂಡಾಡಿದ್ದು ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.