
ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ ‘ಕಾಂತರ’ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಿ 25 ದಿನಗಳು ಪೂರೈಸಿದ್ದು, ಗಳಿಕೆಯಲ್ಲಿಯೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ.
ಈಗಾಗಲೇ ಹಲವು ದಾಖಲೆ ಬರೆದ ‘ಕಾಂತಾರ’ ಮತ್ತೊಂದು ಹೊಸ ದಾಖಲೆ ಬರೆದಿದೆ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ‘ಕಾಂತಾರ’ ಪಾತ್ರವಾಗಿದೆ. 25 ದಿನಗಳ ಅವಧಿಯಲ್ಲಿ 77 ಲಕ್ಷ ಮಂದಿ ‘ಕಾಂತಾರ’ ಸಿನಿಮಾ ನೋಡಿರುವುದು ರಾಜ್ಯದಲ್ಲಿ ಹೊಸ ದಾಖಲೆಯಾಗಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ ಚಿತ್ರಗಳು ಕನ್ನಡದಲ್ಲಿ ದಾಖಲೆ ಬರೆದಿವೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 1’ ಹಾಗೂ ‘ಕೆಜಿಎಫ್ ಚಾಪ್ಟರ್ 2’ ರಾಜ್ಯದಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಚಿತ್ರಗಳಾಗಿದ್ದು, ಇವುಗಳನ್ನು ಹಿಂದಿಕ್ಕಿದ ‘ಕಾಂತಾರ’ ಹೊಸ ದಾಖಲೆ ಬರೆದಿದೆ.
ರಾಜ್ಯದಲ್ಲಿ ‘ರಾಜಕುಮಾರ’ ಚಿತ್ರವನ್ನು 65 ಲಕ್ಷ, ‘ಕೆಜಿಎಫ್ ಚಾಪ್ಟರ್ 1’ ಚಿತ್ರವನ್ನು 75 ಲಕ್ಷ, ‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ಕರ್ನಾಟಕದಲ್ಲಿ ಸುಮಾರು 72 ಲಕ್ಷ ಜನ ವೀಕ್ಷಿಸಿದ್ದು, ‘ಕಾಂತರ’ ಚಿತ್ರವನ್ನು 77 ಲಕ್ಷ ಜನ ವೀಕ್ಷಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಒಂದು ಕೋಟಿ ಜನ ಈ ಚಿತ್ರ ವೀಕ್ಷಿಸುವ ಸಾಧ್ಯತೆ ಇದೆ. ಈ ಮೂಲಕ ‘ಕಾಂತಾರ’ ಮತ್ತೊಂದು ದಾಖಲೆ ನಿರ್ಮಿಸಲಿದೆ. ಇವೆಲ್ಲ ಚಿತ್ರಗಳನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿರುವುದು ವಿಶೇಷವಾಗಿದೆ.